ಬೆಂಗಳೂರು: ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಅಮಿತ್ ಮಿಶ್ರಾ, ನಗರದ 43ನೇ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾದರು.
ಮಿಶ್ರಾ ಅವರು ತಮ್ಮ ಸ್ನೇಹಿತೆ ಬಾಲಿವುಡ್ ಚಿತ್ರ ನಿರ್ಮಾಪಕಿ ವಂದನಾ ಜೈನ್ ಜತೆಯಲ್ಲಿ 2015ರ ಸೆಪ್ಟೆಂಬರ್ 25ರಂದು ರಿಟ್ಜ್ ಕಾರ್ಲ್ಟನ್ ಹೋಟೆಲ್‌ಗೆ ಹೋಗಿದ್ದರು. ಅಂದೇ ರಾತ್ರಿ ಅವರಿಬ್ಬರ ನಡುವೆ ಜಗಳವಾಗಿತ್ತು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮಿಶ್ರಾ, ಹಲ್ಲೆ ಮಾಡಿದ್ದರು. ಈ ಸಂಬಂಧ ವಂದನಾ, ಸೆ. 27ರಂದು ಅಶೋಕ ನಗರ ಠಾಣೆಗೆ ದೂರು ನೀಡಿದ್ದರು.
ಆನಂತರ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. ಅವರು ಜಾಮೀನು ಮೇಲೆ ಬಿಡುಗಡೆ ಆಗಿದ್ದರು. ಪ್ರಕರಣ ರದ್ದುಪಡಿಸುವಂತೆ ಮಿಶ್ರಾ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾ ಆಗಿತ್ತು.
ಇದರ ಮಧ್ಯೆಯೇ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಇತ್ತೀಚೆಗಷ್ಟೇ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ನಗರದ 43ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಕೈಗೆತ್ತಿಕೊಂಡಿತ್ತು. ಹೀಗಾಗಿ, ಆರೋಪಿ ಅಮಿತ್ ಮಿಶ್ರಾ ತಮ್ಮ ವಕೀಲರ ಸಮೇತ ವಿಚಾರಣೆಗೆ ಹಾಜರಾದರು.
ಆರೋಪಿ ಪರ ವಕೀಲರು, ‘ಇದೊಂದು ಸುಳ್ಳು ಪ್ರಕರಣ. ಇದನ್ನು ರದ್ದುಪಡಿಸಿ ನನ್ನ ಕಕ್ಷಿದಾರರಿಗೆ (ಅಮಿತ್) ನ್ಯಾಯ ಒದಗಿಸಬೇಕು’ ಎಂದು ಕೋರಿದರು. ಅದನ್ನು ಆಲಿಸಿದ ನ್ಯಾಯಾಲಯ, ವಿಚಾರಣೆಯನ್ನು ಜೂನ್ 21ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.