ಬೆಂಗಳೂರು: ಸಂಜೆ ಬಳಿಕ ಯಾರೂ ತಲೆ ಹಾಕದ ಜಾಗದಲ್ಲಿ ಕವಿ ಹೃದಯಗಳು, ವೈಚಾರಿಕ ಮನುಸುಗಳು ಸೇರಿದ್ದವು. ಅಲ್ಲಿ ಕಲೆತವರು ಸಾಮರಸ್ಯದ ಸಂದೇಶ ಸಾರುವ ಕವನಗಳನ್ನು ವಾಚಿಸಿದರು. ವೈಚಾರಿಕ ಪ್ರಜ್ಞೆ ಬೆಳೆಸುವ ಬಗ್ಗೆ ಜಾಗೃತಿ ಮೂಡಿಸಿದರು.
ಶುಕ್ರವಾರ ರಾತ್ರಿ ಈ ದೃಶ್ಯ ಕಂಡು ಬಂದಿದ್ದು ನಗರದ ಹರಿಶ್ವಂದ್ರ ಘಾಟ್‌ನಲ್ಲಿ. ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಕನ್ನಡ ಕ್ರಿಯಾ ಸಮಿತಿ ಏರ್ಪಡಿಸಿದ್ದ ‘ಸ್ಮಶಾನ ಕವಿಗೋಷ್ಠಿ’ ಕುವೆಂಪು ಚಿಂತನೆಗಳನ್ನು ವಿನೂತನ ರೀತಿಯಲ್ಲಿ ಪ್ರಚಾರ ಮಾಡಿತು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ. ಮರುಳಸಿದ್ದಪ್ಪ, ‘ಕುವೆಂಪು ಸಾಹಿತ್ಯವನ್ನು ಓದಿ ಅರ್ಥಮಾಡಿಕೊಂಡವರಿಗೆ ಸ್ಮಶಾನದಲ್ಲಿ ಕುವೆಂಪು ಜನ್ಮದಿನವನ್ನು ಏಕೆ ಆಚರಿಸುತ್ತಿದ್ದೇವೆ ಎಂಬುದು ತಿಳಿಯುತ್ತದೆ. ಬದುಕನ್ನು, ಸಮಾಜವನ್ನು ಪರಿಪೂರ್ಣ ದೃಷ್ಟಿಯಿಂದ ನೋಡಬೇಕು ಎಂದು ಆ ಮಹಾಕವಿ ಹೇಳುತ್ತಿದ್ದರು’ ಎಂದರು.
ಈಶ್ವರನೇ ತಂದೆ:
‘ಕುವೆಂಪು ಅವರು ವೈಜ್ಞಾನಿಕ, ವೈಚಾರಿಕ, ಸಾಮಾಜಿಕ ಚಿಂತನೆ ಅಳವಡಿಸಿಕೊಂಡಿದ್ದರು. ಅವರ ಹಾದಿಯಲ್ಲಿ ನಾವು ನಡೆಯೋಣ’ ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ ಕುಮಾರ್ ತಿಳಿಸಿದರು.
ಕೇಂದ್ರ ಸಚಿವ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸ್ಮಶಾನದ ಈಶ್ವರನೇ ನಮ್ಮ ತಂದೆ. ಸಮಾಜದಲ್ಲಿ ಜ್ವಲಂತ ಸಮಸ್ಯೆಗಳು ಇರುವಾಗ ಸಚಿವರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅಹಂಕಾರ, ದ್ವೇಷ ಒಳ್ಳೆಯದಲ್ಲ. ಯುದ್ಧವು ವಿನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಕುವೆಂಪು ಅವರು ಕುರುಕ್ಷೇತ್ರ ನಾಟಕದಲ್ಲಿ ಬಿಂಬಿಸಿದ್ದಾರೆ. ವಿವಾದಾತ್ಮಕ ಹೇಳಿಕೆ ಕೊಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕೇಂದ್ರ ಸಚಿವ ಅನಂತ ಕುಮಾರ ಹಗಡೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದರು.
ಪ್ರಾಧ್ಯಾಪಕ ಕೋ.ವೆಂ.ರಾಮಕೃಷ್ಣ ಅವರು ‘ನಿದ್ದೆ ಬಿಟ್ಟು ಎದ್ದು ಬಾರೊ ಕೆಚ್ಚೆದೆಯ ಕನ್ನಡಿಗ’ ಗೀತೆ ಹಾಡುವ ಮೂಲಕ ಕವಿಗೋಷ್ಠಿಗೆ ಉದ್ಘಾಟಿಸಿದರು.
ಕವಯತ್ರಿ ಶಾಂತಲಾ ಸುರೇಶ್ ಅವರು ಕುವೆಂಪು ಸಾಹಿತ್ಯದ ಕುರಿತ ಕವಿತೆಯನ್ನು, ಆರ್. ಹಂಸ ಸ್ಮಶಾನದ ಕುರಿತ ಕವನವನ್ನು ಓದಿದರು.
ಮಮತಾ ವಾರನಹಳ್ಳಿ ಅವರ ‘ಬಿದಿರ ತೇರಿನ ಮೇಲೆ’ ಕವಿತೆಗೆ ಮೆಚ್ಚುಗೆ ವ್ಯಕ್ತವಾಯಿತು. ಸಾವು, ಸ್ಮಶಾನ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ ಎಂದು ಅವರು ಕವಿತೆ ಮೂಲಕ ಬಿಂಬಿಸಿದರು.
ಪೊಲೀಸ್ ಅಧಿಕಾರಿ ಕೆ. ಹನುಮಂತಯ್ಯ ಅವರು ಹಾಸ್ಯ ಚುಟುಕು ಹೇಳಿ ಸಭಿಕರನ್ನು ನಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.