ಬೆಂಗಳೂರು: ‘ಕವಿತೆಯನ್ನು ಬರೆಯಬೇಕೆಂದು ಹಟಕ್ಕೆ ಬಿದ್ದು ಬರೆಯುವವರು ಸಾಕಷ್ಟು ಜನ ಇದ್ದಾರೆ. ಅಲ್ಲಿ ಹಟ ಇರುತ್ತದೆಯೇ ಹೊರತು ಕವಿತೆ ಇರುವುದಿಲ್ಲ. ಕವಿತೆ ಯಾವಾಗಲೂ ಸಹಜವಾಗಿ ಮೂಡಬೇಕು’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರು ಅಭಿಪ್ರಾಯಪಟ್ಟರು.
ನಗರದಲ್ಲಿ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಸಂಗೀತ ಧಾಮ, ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕವಿ ಜರಗನಹಳ್ಳಿ ಶಿವಶಂಕರ್ ಅವರ ಹನಿಗವನ, ವಚನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಹಜ ಕವಿ ಮಾತ್ರ ಒಳ್ಳೆಯ ಹಾಡು ಬರೆಯಲು ಸಾಧ್ಯ ಎಂದು ಕೆ.ಎಸ್. ನರಸಿಂಹಸ್ವಾಮಿ ಅವರು ಹೇಳುತ್ತಿದ್ದರು. ಆದರೆ ಇಂದು ಹಲವರು ಇದ್ದಕ್ಕಿದ್ದ ಹಾಗೆ ಭಾವಗೀತೆಯನ್ನು ಬರೆಯುತ್ತಾರೆ. ಪುಸ್ತಕ ಬಿಡುಗಡೆ ಮಾಡುತ್ತಾರೆ. ಪ್ರಸಿದ್ಧ ಗಾಯಕರಿಂದ ಧ್ವನಿಸುರುಳಿ ಹೊರತರುತ್ತಾರೆ. ಇವರ ಮಧ್ಯೆ ನಿಜವಾದ ಬರಹಗಾರರು ಮರೆಯಾಗುತ್ತಿದ್ದಾರೆ’ ಎಂದು ಎಚ್.ಎಸ್. ವೆಂಕಟೇಶಮೂರ್ತಿ ಅವರು ಹೇಳಿದರು.
‘ಡುಂಡಿರಾಜ್ ಮತ್ತು ಶಿವಶಂಕರ್ ನಮ್ಮ ಸಾಹಿತ್ಯ ಲೋಕದಲ್ಲಿರುವ ಪ್ರಮುಖ ಚುಟುಕು ಕವಿಗಳು. ಇಬ್ಬರದ್ದೂ ವಿಭಿನ್ನ ಮಾರ್ಗ. ಶಿವಶಂಕರ್ ಗಂಭೀರ ಕಾಳಜಿ ಹೊಂದಿರುವ ಚುಟುಕು ಕವನವನ್ನು ಬರೆಯುವ ಮೂಲಕ ಜನರ ಮನ ತಟ್ಟಿದ್ದಾರೆ’ ಎಂದು ಎಚ್.ಎಸ್. ವೆಂಕಟೇಶಮೂರ್ತಿ ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್ ಅವರು ಮಾತನಾಡಿ, ‘ಸಂಗೀತಗಾರರು, ಕವಿಗಳು ಸಮಾಜದಲ್ಲಿ ಸಾಂಸ್ಕೃತಿಕ ಅಭಿರುಚಿ ಬೆಳೆಸುತ್ತಿರುವ ಪರಿ ಅನನ್ಯವಾದುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜರಗನಹಳ್ಳಿ ಶಿವಶಂಕರ್ ಮತ್ತು ಅವರ ಪತ್ನಿ ಶೈಲಜಾ ಅವರನ್ನು ಗೊ.ರು. ಚನ್ನಬಸಪ್ಪ ಸನ್ಮಾನಿಸಿದರು. ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದರು.