ADVERTISEMENT

ಹನ್ನೆರಡು ಕನ್ನಡ ಚಲನಚಿತ್ರಗಳಿಗೆ ಸೆನ್ಸಾರ್ ಸಂಕಷ್ಟ

ಗಣೇಶ ವೈದ್ಯ
Published 23 ಮಾರ್ಚ್ 2016, 19:30 IST
Last Updated 23 ಮಾರ್ಚ್ 2016, 19:30 IST

ಬೆಂಗಳೂರು: ಸೆನ್ಸಾರ್ ಮಂಡಳಿಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಬಿಡುಗಡೆಗೆ ಕಾದಿರುವ ಕನ್ನಡ ಚಿತ್ರಗಳಿಗೆ ಸಂಕಷ್ಟ ತಂದೊಡ್ಡಿದೆ. ಅಕಿರ, ತುಂಡೈಕ್ಳ ಸಹವಾಸ, ಹಾಫ್ ಮೆಂಟ್ಲು, ಅಜ್ಜಿ ಲೇಹ್ಯ ಸೇರಿದಂತೆ ಹನ್ನೆರಡು ಚಿತ್ರಗಳು ಮಂಡಳಿಯ ಅರ್ಹತಾ ಪತ್ರಕ್ಕಾಗಿ ಕಾಯುತ್ತಿವೆ.

‘ಕಿರಗೂರಿನ ಗಯ್ಯಾಳಿಗಳು’ ಚಿತ್ರದಲ್ಲಿನ ಸಂಭಾಷಣೆ ಮ್ಯೂಟ್ ಮಾಡಿದ ಕಾರಣಕ್ಕಾಗಿ ಸೆನ್ಸಾರ್ ಮಂಡಳಿ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ ನಡೆದ ಸಭೆಯಿಂದ ನತಾಶಾ ಡಿಸೋಜಾ ಅರ್ಧದಲ್ಲೇ ಹೊರನಡೆದಿದ್ದಾರೆ. ಈ ಗಲಾಟೆಯ ನಡುವೆ ಸೆನ್ಸಾರ್ ಮಂಡಳಿ ಯಾವುದೇ ಚಿತ್ರವನ್ನು ವೀಕ್ಷಿಸಿ ಅರ್ಹತಾ ಪತ್ರ ನೀಡುತ್ತಿಲ್ಲ. ಇದು ಸೆನ್ಸಾರ್‌ಗಾಗಿ ಸರದಿಯಲ್ಲಿರುವ ಸಿನಿಮಾಗಳಿಗೆ ತೊಡಕಾಗಿದೆ.

ಸಮಸ್ಯೆಯ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿ ನತಾಶಾ ಡಿಸೋಜ, ‘‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ಸೆನ್ಸಾರ್ ಸಮಸ್ಯೆಗೆ ಸಂಬಂಧಿಸಿದಂತೆ ಪದೇ ಪದೇ ಕಚೇರಿ ಮುಂದೆ ಪ್ರತಿಭಟನೆ, ಮನವಿ ಸಲ್ಲಿಸುವುದು ನಡೆಯುತ್ತಿದೆ. ಇವುಗಳಿಂದಾಗಿ ನಾನು ಕಚೇರಿಯಲ್ಲೇ ಇರುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಬೇರೆ ಸಿನಿಮಾಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಸದ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಕಾರಣಕ್ಕಾಗಿ ನಾನು ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಗೆ ಹಾಜರಾಗಿದ್ದೆ. ಸೆನ್ಸಾರ್‌ಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ಇತರ ನಿರ್ಮಾಪಕರುಗಳಿಗೆ ತೊಂದರೆ ಆಗಬಾರದು ಎಂಬುದು ನನ್ನ ಕಾಳಜಿ’ ಎಂದರು ನತಾಶಾ ಡಿಸೋಜ.

ಸೆನ್ಸಾರ್ ಮಂಡಳಿ ನಡೆ ತಪ್ಪು: ‘‘ಕಿರಗೂರಿನ ಗಯ್ಯಾಳಿಗಳು’ ಚಿತ್ರದವರು ಸೆನ್ಸಾರ್ ಅರ್ಹತಾಪತ್ರ ಪಡೆದುಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾದ ನಂತರ ಸಾರ್ವಜನಿಕರು ಮ್ಯೂಟ್ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂಬ ಕಾರಣಕ್ಕೆ ಚಿತ್ರತಂಡದವರು ವಾಣಿಜ್ಯ ಮಂಡಳಿ ಎದುರು ಬಂದಿದ್ದಾರೆ.

ಅವರು ಮೊದಲೇ ಮೇಲ್ಮನವಿ ಮಾಡಬೇಕಿತ್ತು. ಇವೆಲ್ಲವೂ ನಿಜ. ಆದರೆ ಮೇಲ್ನೋಟಕ್ಕೆ ಕಾಣುವಂತೆ ಸೆನ್ಸಾರ್ ಮಂಡಳಿ ಕಡೆಯಿಂದ ದೊಡ್ಡ ಲೋಪವಾಗಿದೆ. ಪ್ರೋಮೊದಲ್ಲಿ ಅವಕಾಶ ನೀಡಿರುವ ಸಂಭಾಷಣೆಗೆ ಚಿತ್ರದಲ್ಲಿ ಕತ್ತರಿ ಹಾಕಲಾಗಿದೆ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಪ್ರತಿಕ್ರಿಯಿಸಿದ್ದಾರೆ.

‘ಸೆನ್ಸಾರ್ ಮಂಡಳಿಯ ಅಧಿಕಾರಿಗಳಿಗೆ ಕನ್ನಡ ಭಾಷೆಯ ಜ್ಞಾನ ಇಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣ. ಭಾಷೆ ಸೂಕ್ಷ್ಮ ವಿಚಾರ. ಹಾಗಾಗಿ ಆಯಾ ರಾಜ್ಯದ ಪ್ರಾದೇಶಿಕ ಸೆನ್ಸಾರ್ ಮಂಡಳಿಗೆ ಸ್ಥಳೀಯ ಭಾಷೆಯ ಅರಿವು ಇರುವವರನ್ನೇ ನೇಮಿಸಬೇಕು ಎಂಬುದೂ ನಮ್ಮ ಬೇಡಿಕೆಯಾಗಿದೆ. ಈಗ ಮಂಡಳಿ ಬೇರೆ ಸಿನಿಮಾ ನೋಡುತ್ತಿಲ್ಲ. ಇದರಿಂದ ಸಿನಿಮಾ ಬಿಡುಗಡೆ ಸಿದ್ಧತೆಯಲ್ಲಿರುವ ನಿರ್ಮಾಪಕರು ತೊಂದರೆ ಅನುಭವಿಸುತ್ತಾರೆ’ ಎಂದು ಅವರು ತಿಳಿಸಿದರು.

*
ನಾವು ಸೆನ್ಸಾರ್‌ಗಾಗಿ ಅರ್ಜಿ ಹಾಕಿ ಕಾಯುತ್ತಿದ್ದೇವೆ. ಆದರೆ, ‘ಸದ್ಯ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯದೇ ಯಾವ ಚಿತ್ರವನ್ನೂ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಆ ಬಗ್ಗೆ ಕ್ಷಮೆ ಕೇಳುತ್ತೇವೆ’ ಎಂದು ಸೆನ್ಸಾರ್ ಮಂಡಳಿ ಕಡೆಯಿಂದ ಪ್ರತಿಕ್ರಿಯೆ ಬಂದಿದೆ. ಇದರಿಂದಾಗಿ ಚಿತ್ರದ ಬಿಡುಗಡೆಗೆ ಮಾಡಿಕೊಂಡ ನಮ್ಮ ಯೋಜನೆಗಳೆಲ್ಲ ತಲೆ ಕೆಳಗಾಗುತ್ತವೆ. ಚಿತ್ರಮಂದಿರದ ಸಮಸ್ಯೆ ಬಿಗಡಾಯಿಸುತ್ತದೆ.
–ನವೀನ್ ರೆಡ್ಡಿ, ‘ಅಕಿರ’ ಚಿತ್ರದ ನಿರ್ದೇಶಕ

*
ಯಾವುದೋ ಒಂದು ಚಿತ್ರದ ಸಮಸ್ಯೆಯಿಂದಾಗಿ ಉಳಿದ ಚಿತ್ರಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದರೆ ಅದು ಇತರ ನಿರ್ಮಾಪಕರ ಮೇಲೆ ಪರಿಣಾಮ ಬೀರುತ್ತದೆ. ಅಧಿಕಾರದಲ್ಲಿರುವವರು ಇಂಥ ಸಮಸ್ಯೆಯನ್ನು ಪರಿಹರಿಸಿಕೊಂಡು, ಎಲ್ಲರಿಗೂ ಅನುಕೂಲವಾಗುವಂತೆ ನಡೆದುಕೊಳ್ಳಬೇಕು. ಒಬ್ಬ ಶಿಕ್ಷಕನ ಜೊತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಇಡೀ ಶಾಲೆಯೇ ಕೆಲಸ ಮಾಡುತ್ತಿಲ್ಲ ಎಂದರೆ ಶಿಕ್ಷೆ ಅನುಭವಿಸುವವರು ಮಕ್ಕಳಾಗಿರುತ್ತಾರೆ. ಹಾಗಾಯಿತು ಇದು.
–ಬಿ.ಎಂ. ಗಿರಿರಾಜ್, ‘ತುಂಡೈಕ್ಳ ಸಹವಾಸ’ ನಿರ್ದೇಶಕ

ADVERTISEMENT

*
ಸಮಸ್ಯೆ ಯಾರ ಕಡೆಯಿಂದಲೇ ಆಗಿರಬಹುದು, ಒಟ್ಟಾರೆ ಪ್ರಭಾವ ಚಿತ್ರೋದ್ಯಮದ ಮೇಲೆ ಆಗುತ್ತಿದೆ. ನಾನು ಈ ವಾರದಲ್ಲಿ ‘ಜೈ ಮಾರುತಿ 800’ ಚಿತ್ರವನ್ನು ಸೆನ್ಸಾರ್ ಮಾಡಿಸಬೇಕಿದೆ. ಆದರೆ ಸದ್ಯ ಸೆನ್ಸಾರ್‌ಗಾಗಿ ಚಿತ್ರಗಳು ಸರದಿಯಲ್ಲಿ ಕಾಯುತ್ತಿವೆ. ಅವನ್ನೆಲ್ಲ ಮುಗಿಸಿ ನಮ್ಮ ಸಿನಿಮಾ ನೋಡಬೇಕು. ಇದು ಹೀಗೇ ಮುಂದೆ ಬರುವ ಚಿತ್ರಗಳ ಮೇಲೂ ಪರಿಣಾಮ ಬೀರುತ್ತದೆ. ನಿರ್ಮಾಪಕರು, ಹಂಚಿಕೆದಾರರು, ಪ್ರದರ್ಶಕರು ಎಲ್ಲರೂ ಇದರಿಂದ ತೊಂದರೆಗೆ ಸಿಲುಕಿಕೊಳ್ಳುತ್ತಾರೆ.
–ಜಯಣ್ಣ, ನಿರ್ಮಾಪಕ–ವಿತರಕ

*
ನತಾಶಾ ಡಿಸೋಜ ಅವರು ಹೇಳುವಂತೆ ನಾವು ನಿತ್ಯ ಹೋಗಿ ಸೆನ್ಸಾರ್ ಮಂಡಳಿ ಎದುರು ಪ್ರತಿಭಟನೆ ಮಾಡುತ್ತಿಲ್ಲ. ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳೋಣ ಎಂದು ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಲು ಸಮಯ ನಿಗದಿ ಮಾಡಿದ್ದು ಅವರೇ. ಅವರ ತಪ್ಪನ್ನು ಪ್ರಶ್ನಿಸಿದ್ದಕ್ಕೆ ಸಭೆಯಿಂದ ಹೊರಟುಬಿಟ್ಟರು. ನಮ್ಮಿಂದಾಗಿ ಇತರೆ ಚಿತ್ರಗಳನ್ನು ವೀಕ್ಷಿಸಲು ಅವಕಾಶವಾಗುತ್ತಿಲ್ಲ ಎಂಬುದು ಸುಳ್ಳು. ನಾವು ಎಲ್ಲಿಯೂ ಅವರನ್ನು ತಡೆದಿಲ್ಲ.
–ಸುಮನ್ ಕಿತ್ತೂರು, ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.