ಬೆಂಗಳೂರು: ‘ರಂಗಭೂಮಿಯಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಅನೇಕ ಹಿರಿಯ ಕಲಾವಿದರು ಇದ್ದಾರೆ. ಅವರ ಬದುಕು, ಸಾಧನೆಯನ್ನು ದಾಖಲಿಸಲು ನಾಟಕ ಅಕಾಡೆಮಿ ಮುಂದಾಗಬೇಕು’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ನಗರದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಸಮಾರಂಭದಲ್ಲಿ ರಂಗಸಂಪನ್ನರು ಮಾಲಿಕೆ ಹಾಗೂ ಜಿಲ್ಲಾ ರಂಗ ಮಾಹಿತಿ ಕುರಿತ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ನಮಗಿಂತ ಹಿರಿಯ ಜೀವಗಳು ಕಲಾಕ್ಷೇತ್ರಕ್ಕೆ ಅವಿರತವಾಗಿ ದುಡಿಯುತ್ತಿದ್ದಾರೆ. ಅವರು ನಮ್ಮಿಂದ ದೂರವಾದ ಮೇಲೆ ರಂಗಭೂಮಿಗೆ ಸಂಬಂಧಿಸಿದ ಅಪರೂಪದ ಮಾಹಿತಿಗಳು ಮರೆಯಾಗುವ ಸಾಧ್ಯತೆಯೇ ಹೆಚ್ಚು. ಅವರಿಂದಲೇ ಮಾಹಿತಿಗಳನ್ನು ಪಡೆದು ದಾಖಲೀಕರಣ ಮಾಡಬೇಕು’ ಎಂದು ತಿಳಿಸಿದರು.
‘ರಂಗಕರ್ಮಿ ಎಚ್.ವಿ.ವೆಂಕಟಸುಬ್ಬಯ್ಯ ಅವರು ಕಳೆದ 35 ವರ್ಷಗಳಿಂದ ಹವ್ಯಾಸಿ ರಂಗಭೂಮಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತಾ ಬಂದಿದ್ದಾರೆ.
ಅವುಗಳನ್ನು ಡಿಜಿಟಲೀಕರಣ ಮಾಡಿ ಸಂರಕ್ಷಿಸಬೇಕೆಂದು ಅವರು ಕೋರಿದ್ದಾರೆ. ಈ ಕೆಲಸವನ್ನು ಪ್ರಸಕ್ತ ವರ್ಷದಲ್ಲೇ ಮಾಡಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಅವರು ಸೂಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ‘ರಂಗ ಸಾಧಕರ ಬದುಕು ಹಾಗೂ ವಿವಿಧ ಜಿಲ್ಲೆಗಳಲ್ಲಿ ರಂಗಭೂಮಿ ಚಟುವಟಿಕೆಗಳು, ಕಲಾವಿದರು, ಸಂಘ– ಸಂಸ್ಥೆಗಳ ಮಾಹಿತಿಯನ್ನು ಒಳಗೊಂಡ ಕೃತಿಗಳನ್ನು ಹೊರ ತಂದಿರುವುದು ಶ್ಲಾಘನಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಸಂಪನ್ನರು ಮಾಲಿಕೆಯ ಲೇಖಕರ ಪೈಕಿ ಮಾತನಾಡಿದ ಡಾ.ಪಿ.ಬಿ.ಶಿವಣ್ಣ, ‘ವೃತ್ತಿ ರಂಗಭೂಮಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮುಂದಿನ ಪೀಳಿಗೆಗೆ ಅದು ಸಿಗುತ್ತದೋ ಇಲ್ಲವೋ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ರಂಗ ಸಾಧಕರ ಬದುಕು, ಸಾಂಸ್ಕೃತಿಕ ಹಿನ್ನೋಟವನ್ನು ಕೃತಿಗಳಲ್ಲಿ ದಾಖಲಿಸುವಂತಹ ಕೆಲಸ ಅರ್ಥಪೂರ್ಣವಾದದ್ದು’ ಎಂದು ಹೇಳಿದರು.
ಸನ್ಮಾನ: ರಂಗಕರ್ಮಿಗಳಾದ ಜಿ.ವಿ.ಶಾರದ, ವಿ.ಲಕ್ಷ್ಮೀಪತಿ, ಕೆ.ಎನ್. ವಾಸುದೇವಮೂರ್ತಿ, ಮಲ್ಲಿಕಾರ್ಜುನ ಮಡ್ಡೆ, ಎಸ್.ಬಸವರಾಜು, ಸೋಮಶೇಖರ ಗೌಡ, ಗಜಾನನ ಟಿ.ನಾಯಕ್, ವನಜಶ್ರೀ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 12 ರಂಗಕರ್ಮಿಗಳ ಬದುಕು, ಸಾಧನೆ ಕುರಿತು ರಂಗಸಂಪನ್ನರು ಮಾಲಿಕೆಯಡಿ ಕೃತಿಗಳನ್ನು ಹೊರತರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.