ADVERTISEMENT

ಹೂಡಿಕೆದಾರರಿಗೆ ‘ಆನ್‌ಲೈನ್‌ ವಂಚಕರ’ ಕಾಟ

ಬ್ಯಾಂಕ್‌ ಖಾತೆಗಳಿಗೆ ಕನ್ನ l ಅಪರಿಚಿತರಿಗೆ ಮಾಹಿತಿ ನೀಡದಂತೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:06 IST
Last Updated 13 ಜೂನ್ 2019, 20:06 IST
   

ಬೆಂಗಳೂರು: ‘ಐಎಂಎ ಸಮೂಹ ಕಂಪನಿ’ಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೀಡಾಗಿ ಮೊದಲೇ ಕಂಗಾಲಾಗಿರುವ ಹೂಡಿಕೆದಾರರಿಗೆ, ಇದೀಗ ‘ಆನ್‌ಲೈನ್ ವಂಚಕರ’ ಕಾಟ ಶುರುವಾಗಿದೆ.

ಕಂಪನಿಯಿಂದ ಹಣ ವಾಪಸ್‌ ಕೊಡಿಸುವ ಸೋಗಿನಲ್ಲಿ ಹೂಡಿಕೆದಾರರಿಗೆ ಕರೆ ಮಾಡುತ್ತಿರುವ ವಂಚಕರು, ಅವರ ವೈಯಕ್ತಿಕ ಹಾಗೂ ಬ್ಯಾಂಕ್‌ ಖಾತೆಯ ವಿವರಗಳನ್ನು ಪಡೆದುಕೊಂಡು ಅವುಗಳಿಗೆ ಕನ್ನ ಹಾಕುತ್ತಿದ್ದಾರೆ.

ಈಗಾಗಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಅನೇಕ ಸಾರ್ವಜನಿಕರು, ಮತ್ತೆ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನ್‌ಲೈನ್ ವಂಚಕರ ಕೃತ್ಯದ ವಿರುದ್ಧ ಕೆಲ ಹೂಡಿಕೆದಾರರು ಈಗಾಗಲೇ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

‘ಲಾಭಾಂಶದ ಆಮಿಷವೊಡ್ಡಿದ್ದ ಮನ್ಸೂರ್ ಖಾನ್ ಲಕ್ಷಾಂತರ ರೂಪಾಯಿ ಪಡೆದುಕೊಂಡು ವಂಚಿಸಿ ಪರಾರಿಯಾಗಿದ್ದಾನೆ. ಈಗ ಅಪರಿಚಿತರು, ಹಣ ವಾಪಸ್ ಕೊಡಿಸುವುದಾಗಿ ಹೇಳಿ ಮಾಹಿತಿ ಪಡೆದುಕೊಂಡು ಖಾತೆಯಲ್ಲಿರುವ ಅಲ್ಪಸ್ವಲ್ಪ ಹಣವನ್ನೂ ದೋಚುತ್ತಿದ್ದಾರೆ’ ಎಂದು ಹೂಡಿಕೆದಾರರೊಬ್ಬರು ಅಳಲು ತೋಡಿಕೊಂಡರು.

ಮಾಹಿತಿ ನೀಡದಂತೆ ಪೊಲೀಸರ ಎಚ್ಚರಿಕೆ: ಆನ್‌ಲೈನ್ ವಂಚಕರ ಕೃತ್ಯದ ಬಗ್ಗೆ ದೂರುಗಳು ದಾಖಲಾಗುತ್ತಿದ್ದಂತೆ ಪತ್ರಿಕಾ ಪ್ರಕಟಣೆ ನೀಡಿರುವ ನಗರ ಪೊಲೀಸರು, ‘ಅಪರಿಚಿತರಿಗೆ ವೈಯಕ್ತಿಕ ಹಾಗೂ ಬ್ಯಾಂಕ್‌ ವ್ಯವಹಾರದ ಮಾಹಿತಿ ನೀಡಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಐಎಂಎ ಸಮೂಹ ಕಂಪನಿ’ಯಿಂದ ವಂಚಿತರಾಗಿರುವ ಹೂಡಿಕೆದಾರರ ಅಸಹಾಯಕತೆಯನ್ನು ವಂಚಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ‘ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು’ ಎಂದು ಹೂಡಿಕೆದಾರರಿಗೆ ಕರೆ ಮಾಡಿ ಹೇಳುತ್ತಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಹೂಡಿಕೆದಾರರ ಬ್ಯಾಂಕ್ ಖಾತೆ ವಿವರ, ಐಎಫ್‌ಎಸ್‌ಸಿ ಕೋಡ್, ಡೆಬಿಟ್‌ ಕಾರ್ಡ್ ಸಂಖ್ಯೆ, ಸಿವಿಸಿ ಸಂಖ್ಯೆಯನ್ನು ಪಡೆದು ವಂಚಿಸುವ ಯತ್ನಗಳು ನಡೆಯುತ್ತಿವೆ. ಯಾರಾದರೂ ಅಪರಿಚಿತರು ಕರೆ ಮಾಡಿದರೆ ಯಾವುದೇ ಮಾಹಿತಿ ನೀಡಬಾರದು. ಅಂಥ ಕರೆಗಳ ಬಗ್ಗೆ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡಿ’ ಎಂದು ಪೊಲೀಸರು ಕೋರಿದ್ದಾರೆ.

28 ಸಾವಿರ ದೂರು: ಕಂಪನಿ ವಿರುದ್ಧ ದೂರು ನೀಡುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಗುರುವಾರದ ಅಂತ್ಯಕ್ಕೆ 28 ಸಾವಿರ ಹೂಡಿಕೆದಾರರು ತಮ್ಮ ದೂರು ದಾಖಲಿಸಿದ್ದಾರೆ.

ಶಿವಾಜಿನಗರದ ಎ.ಎಸ್. ಕಲ್ಯಾಣ ಮಂಟಪದಲ್ಲಿ ದೂರು ಸ್ವೀಕಾರಕ್ಕೆ ಎಂಟು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಅಲ್ಲಿ ಮದುವೆ ಇದ್ದ ಕಾರಣ ಗುರುವಾರ ಗಣೇಶ್ ಬಾಗ್ ಸಭಾಂಗಣದಲ್ಲಿ‌ ದೂರು ಸ್ವೀಕಾರ ಪ್ರಕ್ರಿಯೆ ಮುಂದುವರಿಸಲಾಯಿತು. ನಗರ, ರಾಜ್ಯ, ಹೊರ ರಾಜ್ಯ ಹಾಗೂ ಹೊರ ದೇಶಗಳಿಂದಲೂ ಬಂದು ಹೂಡಿಕೆದಾರರು ದೂರು ನೀಡುತ್ತಿದ್ದಾರೆ. ದೂರು ಸ್ವೀಕಾರ ಪ್ರಕ್ರಿಯೆ ಶುಕ್ರವಾರವೂ ಮುಂದುವರಿಯಲಿದೆ.

₹ 40 ಲಕ್ಷ ಹೂಡಿಕೆ: ಮೈಸೂರಿನ ಫೌಜಿಯಾ ಎಂಬುವರು ಕಂಪನಿಯಲ್ಲಿ ₹ 40 ಲಕ್ಷ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ‘ದೇವರ ಹೆಸರಿನಲ್ಲಿ ನಂಬಿಸಿದ್ದರಿಂದ ಚಿಕ್ಕಮ್ಮನ ₹ 25 ಲಕ್ಷ ಸೇರಿ ₹40 ಲಕ್ಷ ಹೂಡಿಕೆ ಮಾಡಿದ್ದೆ. ಈಗ ಕಂಪನಿ ಬಂದ್ ಆಗಿದ್ದು, ನಾನು ಬೀದಿಗೆ ಬಂದಿದ್ದೇನೆ’ ಎಂದು ಫೌಜಿಯಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.