ADVERTISEMENT

ಹೊಟ್ಟಿಯೊಳಗ ಮುಳ್ಳು ಚುಚ್ಚಿದಾಂಗ ಆಗತೈತಿ

ಅತ್ಯಾಚಾರ ಘಟನೆಗಳ ಕುರಿತು ಪ್ರೊ. ಮಾಲತಿ ಪಟ್ಟಣಶೆಟ್ಟಿ ವಿಷಾದ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2014, 19:53 IST
Last Updated 2 ನವೆಂಬರ್ 2014, 19:53 IST
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷೆ ಗಾಯತ್ರಿ ರಾಮಣ್ಣ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು (ಬಲದಿಂದ ಮೂರನೆಯವರು) ಇಂದಿರಾ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಸಂಘದ ಕಾರ್ಯದರ್ಶಿ ಆಶಾ ಹೆಗಡೆ, ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮತ್ತು ಕವಯತ್ರಿ ಡಾ.ಎಚ್‌.ಎಲ್.ಪುಷ್ಪ ಚಿತ್ರದಲ್ಲಿದ್ದಾರೆ
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷೆ ಗಾಯತ್ರಿ ರಾಮಣ್ಣ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು (ಬಲದಿಂದ ಮೂರನೆಯವರು) ಇಂದಿರಾ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಸಂಘದ ಕಾರ್ಯದರ್ಶಿ ಆಶಾ ಹೆಗಡೆ, ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮತ್ತು ಕವಯತ್ರಿ ಡಾ.ಎಚ್‌.ಎಲ್.ಪುಷ್ಪ ಚಿತ್ರದಲ್ಲಿದ್ದಾರೆ   

ಬೆಂಗಳೂರು: ‘ದಿನ ಬೆಳಗಾದರೆ ನಮ್ಮ ಕಂದಮ್ಮ­ಗಳ ಮೇಲೆ ನಡೆಯುವ ಅತ್ಯಾಚಾರ­ದಂತಹ ಹೀನ ಕೃತ್ಯಗಳನ್ನು ಕಂಡು ಹೊಟ್ಟೆಯೊಳಗ ನೂರು ಮುಳ್ಳು ಚುಚ್ಚಿದಾಂಗ ಆಗತೈತಿ. ಲೇಖಕಿಯರಾದ ನಾವೆಲ್ಲ ಇದನ್ನು ಕಂಡು  ಸುಮ್ಮನೆ ಕುಳಿತು­ಕೊಳ್ಳಬಾರದು. ಬೀದಿಗಿಳಿದು ಹೋರಾಟ ಮಾಡಬೇಕು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಕರೆ ನೀಡಿದರು.

ನಗರದಲ್ಲಿ ಭಾನುವಾರ ಕರ್ನಾಟಕ ಲೇಖಕಿಯರ ಸಂಘ ಆಯೋಜಿಸಿದ್ದ ರಾಜ್ಯೋತ್ಸವ, ಇಂದಿರಾ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಕವಿಗೋಷ್ಠಿ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.

‘ಲೇಖಕಿಯರು ಸಮಾಜಸೇವೆಗೆ ಇಳಿಯುವುದೇ ಇಲ್ಲ. ಬರೆಯುವುದಷ್ಟೆ ನಮ್ಮ ಕೆಲಸ ಎಂದು ಭಾವಿ­ಸುವವರೇ ಅಧಿಕವಾಗಿದ್ದಾರೆ. ಸಮಸ್ಯೆಗಳ ಕುರಿತು ಕತೆ, ಕವನ, ಕಾದಂಬರಿ ಬರೆಯುವ ಬದಲು,  ಸಮಾಜದ ಒಳಹೊಕ್ಕು ನೋಡಿ, ಅಲ್ಲಿ ನಡೆಯು­ತ್ತಿರುವ ಅನ್ಯಾಯ­ಗಳ ವಿರುದ್ಧ ಪ್ರತಿಭಟಿಸುವ ಮತ್ತು ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ. ಇದು ನಮಗೆ ಓದುವ, ಬರೆಯುವ ಮತ್ತು ಉತ್ಸವಗಳನ್ನು ಮಾಡುವ ಸಮಯವಲ್ಲ. ನಾವೆಲ್ಲರೂ ಸ್ವಲ್ಪಕಾಲ ಬರವಣಿಗೆ ಬದಿಗೊತ್ತಿ, ಅತ್ಯಾಚಾರ­ದಂತಹ ಹೀನ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ, ಶಾಲಾ ಆಡಳಿತ ಮಂಡಳಿ ಮತ್ತು ಪಾಲಕರ ನಡುವೆ ಸಂವಹನ ಕಲ್ಪಿಸುವ ಕಾರ್ಯ ಮಾಡ-­ಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಬಹಳಷ್ಟು ವಿದ್ವತ್‌ ಜನರು ಮತ್ತು ಸಮಾಜ ಸೇವಕರು  ವಾಸಿಸುವ ಈ ನಗರದಲ್ಲಿ ಅತ್ಯಾಚಾರದ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿಯಾ­ಗಿದೆ. ಇದನ್ನು ಪ್ರತಿಬಂಧಿಸುವುದು ನಮ್ಮ ಮೊದಲ ಕರ್ತವ್ಯವಾಗಬೇಕು. ನಾವು ಮಕ್ಕಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮನೆ ಮನೆಗೆ ಹೋಗಿ ಪಾಲಕರಲ್ಲಿ ಅರಿವು ಮೂಡಿಸಬೇಕಿದೆ. ಲಕ್ಷಾಂತರ ರೂಪಾಯಿ ಸುಲಿಗೆ ಮಾಡುವ ಈ ನಗರದ ಶಾಲೆಗಳಲ್ಲಿ ಮಕ್ಕಳಿಗೆ ಸುರಕ್ಷತೆ ಜತೆಗೆ ಮೂಲ ಸೌಕರ್ಯಗಳ ಕೊರತೆ ಇದೆ’ ಎಂದರು.

ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ‘ಹೆಚ್ಚುತ್ತಿರುವ ಅಶ್ಲೀಲ ಚಿತ್ರ ವೀಕ್ಷಣೆ ಮತ್ತು ಕುಡಿತದಿಂದಾಗಿ ಅತ್ಯಾಚಾರ ಘಟನೆಗಳು ಹೆಚ್ಚುತ್ತಿವೆ. ಇಂತಹ ಕೃತ್ಯಗಳನ್ನು ತಡೆಗಟ್ಟುವ ಹಲವಾರು ಕಾರ್ಯಕ್ರಮಗಳಲ್ಲಿ ನಮ್ಮ ಸಂಘವು ತೊಡಗಿಸಿಕೊಂಡಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 18 ಕವಯತ್ರಿಯರು ತಮ್ಮ ಕವನಗಳನ್ನು ವಾಚಿಸಿದರು. ಸುನೀತಾ ವಿ.ಕುಲಕರ್ಣಿ ಅವರ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.