ADVERTISEMENT

‘ಹೊಸ ಜವಳಿ ನೀತಿ ಶೀಘ್ರ’

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:58 IST
Last Updated 24 ಮೇ 2018, 19:58 IST
ಉದ್ಯಮಿಗಳ ಪ್ರಶ್ನೆಗೆ ಅನಂತ್‌ ಕುಮಾರ್‌ ಸಿಂಗ್‌ ಉತ್ತರಿಸಿದರು. ಫಿಕ್ಕಿ ಸಹ ಅಧ್ಯಕ್ಷ ಉಲ್ಲಾಸ್‌ ಕಾಮತ್‌ ಇದ್ದರು –ಪ್ರಜಾವಾಣಿ ಚಿತ್ರ
ಉದ್ಯಮಿಗಳ ಪ್ರಶ್ನೆಗೆ ಅನಂತ್‌ ಕುಮಾರ್‌ ಸಿಂಗ್‌ ಉತ್ತರಿಸಿದರು. ಫಿಕ್ಕಿ ಸಹ ಅಧ್ಯಕ್ಷ ಉಲ್ಲಾಸ್‌ ಕಾಮತ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಾಲ್ಕು ತಿಂಗಳಲ್ಲಿ ಈಗಿರುವ ಜವಳಿ ನೀತಿಯ ಅವಧಿ ಪೂರ್ಣಗೊಳ್ಳಲಿದ್ದು, ಹೊಸ ನೀತಿ ರೂಪಿಸುವ ಕೆಲಸ ಭರದಿಂದ ಸಾಗಿದೆ ಎಂದು ಜವಳಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಆನಂದ್‌ ವಿ. ಕಿತ್ತೂರು ತಿಳಿಸಿದರು.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಹಾಗೂ ಜವಳಿ ಸಚಿವಾಲಯ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉದ್ಯಮಿಗಳ ಸಭೆಯಲ್ಲಿ ಅವರು ತಿಳಿಸಿದರು.

‘ಹೊಸ ನೀತಿ ರೂಪಿಸಲು ಉದ್ಯಮಿಗಳ ಸಮಿತಿ ರಚಿಸಲಾಗಿದ್ದು, ಅವರಿಂದ ಸಲಹೆಗಳನ್ನು ಸ್ವೀಕರಿಸಲಾಗುತ್ತಿದೆ. ಉದ್ಯೋಗ ಸೃಷ್ಟಿ, ಜವಳಿ ಉದ್ಯಮದಲ್ಲಿ ಸುಸ್ಥಿರ ಅಭಿವೃದ್ಧಿ, ಯೋಜನೆಗಳ ಅನುಷ್ಠಾನಕ್ಕೆ ಏಕಗವಾಕ್ಷಿ ಪದ್ಧತಿ ಜಾರಿ... ಹೀಗೆ ವಿವಿಧ ವಿಷಯಗಳನ್ನು ಪ್ರಮುಖವಾಗಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

‘2008ರಿಂದ 2015ರವರೆಗೆ ಸುಮಾರು 2 ಲಕ್ಷ ಮಂದಿಗೆ ಜವಳಿ ಚಟು­ವಟಿ­ಕೆಗಳ ಕುರಿತು ತರಬೇತಿ ನೀಡಲಾಗಿದೆ. 2.56 ಲಕ್ಷ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿದೆ’ ಎಂದು ವಿವರಿಸಿದರು.

ಜವಳಿ ಸಚಿವಾಲಯದ ಕಾರ್ಯದರ್ಶಿ ಅನಂತ್‌ ಕುಮಾರ್ ಸಿಂಗ್, ‘ಜವಳಿ ಕ್ಷೇತ್ರದಲ್ಲಿನ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಬೇಕೆಂದು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಜಾರಿಮಾಡಿದ್ದೇವೆ. ಆದರೆ, ಇದಕ್ಕೆ ಉದ್ಯಮಿಗಳಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ’ ಎಂದು ತಿಳಿಸಿದರು.

‘ಸಂಶೋಧನೆಗಾಗಿ ಉದ್ಯಮಿಗಳು ಶೇ 30ರಷ್ಟು ಹೂಡಿಕೆ ಮಾಡಿದರೆ, 2 ವರ್ಷದವರೆಗೆ ಅದರ ಹಕ್ಕುಸ್ವಾಮ್ಯತೆ ನೀಡುತ್ತೇವೆ. ಶೇ 50ರಷ್ಟು ನೀಡಿದರೆ 5 ವರ್ಷದವರೆಗೆ ಹಾಗೂ ಶೇ 70ರಷ್ಟು ಖರ್ಚು ಭರಿಸಿದರೆ ಹಕ್ಕು ಸಾರ್ವಕಾಲಿಕವಾಗಿರಲಿದೆ. ಹೀಗೆ ನೀವು ಒಂದು ಹೆಜ್ಜೆ ಮುಂದಿಟ್ಟರೆ ಸರ್ಕಾರ ನಿಮ್ಮ ಜೊತೆ ಹೆಜ್ಜೆ ಇಡಲು ಸಿದ್ಧವಾಗಿರುತ್ತದೆ’ ಎಂದು ಭರವಸೆ ನೀಡಿದರು.

ಸರ್ಕಾರದ ಬಾಕಿ ಉಳಿದಿರುವ ಜವಳಿ ಉನ್ನತೀಕರಣ ನಿಧಿ ₹8,500 ಕೋಟಿಯನ್ನು ಬಿಡುಗಡೆ ಮಾಡುವ ಬಗ್ಗೆ ಉದ್ಯಮಿಗಳು ಕೇಳಿದ ಪ್ರಶ್ನೆಗೆ ಉತ್ತ
ರಿಸಿದ ಅವರು, ‘ಆ ಬಗ್ಗೆ ಕ್ರಮಕೈಗೊಳ್ಳುತ್ತಿದ್ದೇವೆ. ಉದ್ಯಮಿಗಳಿಂದ ಮಾಹಿತಿ ಸಂಗ್ರಹಿಸಿ, ನಂತರ ಹಣ ಬಿಡುಗಡೆ ಮಾಡಲಾಗುವುದು’ ಎಂದರು.

ಸೋನಾ ವಳ್ಳಿಯಪ್ಪ ಸಮೂಹದ ವ್ಯವಸ್ಥಾಪಕ ನಿರ್ದೇಶಕ ತ್ಯಾಗರಾಜು ವಳ್ಳಿಯಪ್ಪ, ‘ವಿದ್ಯುತ್‌ ದರ ಹೆಚ್ಚಾಗಿರುವುದು, ಕಾರ್ಮಿಕರ ಅಲಭ್ಯತೆ, ಕನಿಷ್ಠ ಕೂಲಿ... ಹೀಗೆ ನಾನಾ ವಿಷಯಗಳು ಜವಳಿ ಕ್ಷೇತ್ರದ ಅಭಿವೃದ್ಧಿಗೆ ತೊಡಕಾಗಿವೆ. ಉದ್ಯಮದ ಅಭಿವೃದ್ಧಿಗೆ ಸಚಿವಾಲಯ ಪೂರಕ ನೀತಿಯನ್ನು ಜಾರಿ ಮಾಡಬೇಕು’ ಎಂದು ಒತ್ತಾಯಿಸಿದರು.

ಜೂನ್‌ 28ರಿಂದ ಟೆಕ್ನೋಟೆಕ್ಸ್‌–2018

ಜವಳಿ ಸಚಿವಾಲಯ ಹಾಗೂ ಫಿಕ್ಕಿ ವತಿಯಿಂದ ‘ಜವಳಿ ಕೈಗಾರಿಕಾ ಟೆಕ್ನೋಟೆಕ್ಸ್-2018’ ಏಳನೇ ಆವೃತ್ತಿ ಜೂನ್ 28 ಮತ್ತು 29ರಂದು ನಡೆಯಲಿದೆ ಎಂದು ಅನಂತ್ ಕುಮಾರ್ ಸಿಂಗ್ ಹೇಳಿದರು.

ಗುರುಗ್ರಾಮದಲ್ಲಿರುವ ‘ಬಾಂಬೆ ಪ್ರದರ್ಶನ ಕೇಂದ್ರ’ದಲ್ಲಿ ಈ ಉತ್ಸವ ನಡೆಯಲಿದೆ. ಜವಳಿ ವಲಯದ ತಾಂತ್ರಿಕ ಅಂಶಗಳ ಕುರಿತು ಚರ್ಚಿಸಲು ಸೂಕ್ತ ವೇದಿಕೆ ಇದಾಗಿದ್ದು, ಸುಮಾರು 150 ಪ್ರದರ್ಶನಕಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಚೀನಾ, ತೈವಾನ್, ದಕ್ಷಿಣ ಕೋರಿಯಾಗಳಿಗಾಗಿ ವಿಶೇಷ ಗ್ಯಾಲರಿಗಳನ್ನು ಕಾಯ್ದಿರಿಸಲಾಗಿದೆ. 30ಕ್ಕೂ ಹೆಚ್ಚು ರಾಷ್ಟ್ರಗಳಿಂದ ಪಾಲ್ಗೊಳ್ಳುವ 225 ಅಂತರರಾಷ್ಟ್ರೀಯ ಖರೀದಿದಾರರೊಂದಿಗೆ ಮರು ಖರೀದಿದಾರರು, ಮಾರಾಟಗಾರರ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.