ಬೆಂಗಳೂರು: ಯು.ಆರ್. ಅನಂತಮೂರ್ತಿ ಅವರ ಕೃತಿಗಳ ಮರು ಓದಿಗೆ ಇಂಬು ಕೊಡುವ ಮೂರು ದಿನಗಳ ಸಾಹಿತ್ಯ ಹಬ್ಬ ‘ಬೆಂಗಳೂರು ಸಾಹಿತ್ಯ ಉತ್ಸವ’ ಶುಕ್ರವಾರ ಚಾಲನೆ ಪಡೆದುಕೊಂಡಿತು.
ನಗರದ ಎಲೆಕ್ಟ್ರಾನಿಕ್ ಸಿಟಿಯ ವೆಲಂಕಣಿ ಪಾರ್ಕ್‌ನ ಕ್ರೌನ್ ಪ್ಲಾಜಾದ ವಿಶಾಲ ಹುಲ್ಲು ಹಾಸಿನ ಹರವಿನಲ್ಲಿ ಆರಂಭಗೊಂಡ ಈ ‘ಉತ್ಸವ’ದ ಉದ್ಘಾಟನಾ ಕಾರ್ಯಕ್ರಮ ಕನ್ನಡ ಮತ್ತು ಇಂಗ್ಲಿಷ್ ಲೇಖಕರ ಸಮಾಗಮದ ಸಂಕೇತದಂತೆಯೂ ಇತ್ತು.
ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ್, ಶೋಭಾ ಡೇ, ಚೇತನ್ ಭಗತ್, ಬಿನಾಲಕ್ಷ್ಮಿ ನೆಪ್ರಂ ಮತ್ತು ವಿಕ್ರಂ ಸಂಪತ್ ಉದ್ಘಾಟನಾ ಕಾರ್ಯಕ್ರಮದಲ್ಲಿದ್ದರು.
ಸಾಹಿತ್ಯ ಉತ್ಸವ ಮೂರು ವೇದಿಕೆಗಳನ್ನು ಹೊಂದಿದ್ದು, ಅವುಗಳಿಗೆ ಅನಂತಮೂರ್ತಿ ಅವರ ಕೃತಿಗಳ (ಸಂಸ್ಕಾರ, ಸುರಗಿ ಮತ್ತು ಭಾರತೀಪುರ) ಹೆಸರು ಇಡಲಾಗಿದೆ. ಉದ್ಘಾಟನಾ ಸಮಾರಂಭದ ನಂತರ ಅನಂತಮೂರ್ತಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಉತ್ಸವದ ಆವರಣದಲ್ಲಿ ಅನಂತಮೂರ್ತಿ ಅವರ ಅಪರೂಪದ ಭಾವಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಅವರ ಜೀವನದ ವಿವಿಧ ಘಟ್ಟಗಳ ಚಿತ್ರಣ ಕಟ್ಟಿಕೊಡುವ ಈ ಪ್ರದರ್ಶನ ತರುಣ–
ತರುಣಿಯರನ್ನು ತನ್ನತ್ತ ಸೆಳೆಯುತ್ತಿತ್ತು.
ನಾಲ್ಕರಲ್ಲಿ ಯಾವುದು ಹೊಸ ಚಿಗುರು?
‘ಕನ್ನಡದ ಸಂದರ್ಭದಲ್ಲೀಗ ನಾಲ್ಕು ತಲೆಮಾರಿನ ಸಾಹಿತಿಗಳು ಒಟ್ಟೊಟ್ಟಿಗೆ ಸಾಹಿತ್ಯದಲ್ಲಿ ತೊಡಗಿದ್ದಾರೆ. ಅವರಲ್ಲಿ ಯಾರ ಸಾಹಿತ್ಯವನ್ನು ಹೊಸ ಚಿಗುರು ಎಂದು ಗುರುತಿಸುವುದು?’
– ಬೆಂಗಳೂರು ಸಾಹಿತ್ಯ ಉತ್ಸವದ ಮೊದಲ ದಿನ ‘ಸುರಗಿ’ ವೇದಿಕೆಯಲ್ಲಿ ನಡೆದ ‘ಹೊಸ ಚಿಗುರು’ ಗೋಷ್ಠಿಯಲ್ಲಿ ಈ ಪ್ರಶ್ನೆ ಬಲವಾಗಿ ಕಾಡಿತು.
‘ಶ್ರೀನಿವಾಸ ವೈದ್ಯ ಅವರಂತಹ ಲೇಖಕರು ಬರೆಯಲು ಶುರು ಮಾಡಿದ್ದೇ 50 ವರ್ಷ ದಾಟಿದ ಮೇಲೆ. ಅವರ ವಿಭಿನ್ನ ಬರಹಗಳನ್ನು ಹೊಸ ಚಿಗುರು ಎನ್ನಲಾದೀತೇ’ ಎಂಬ ಪ್ರಶ್ನೆ ಮುಂದಿಟ್ಟ ಕಥೆಗಾರ ಎನ್.ವಸುಧೇಂದ್ರ, ‘ಯಾವ ಬರಹ ಹೊಸತೆನಿಸುವುದೋ ಅದು ಹೊಸ ಚಿಗುರು. ವಯಸ್ಸಿನ ಕಟ್ಟುಪಾಡು ಅದಕ್ಕೆ ಬೇಕಿಲ್ಲ’ ಎಂದು ಹೇಳಿದರು.
‘ಹೊಸ ಚಿಗುರು ಒಂದು ನಿರಂತರ ಪ್ರಕ್ರಿಯೆ. ಅದೇನು ಒಂದು ಕ್ರಿಯೆಗೆ ಸೀಮಿತವಾದ ಚಟುವಟಿಕೆ ಅಲ್ಲ’ ಎಂದವರು ವೈದ್ಯೆ, ಲೇಖಕಿ ಕೆ.ಎಸ್. ಪವಿತ್ರಾ.
‘ಈಗ ಹೊಸತು ಎನಿಸಿರುವುದು ಮುಂದೆ ಹಳತಾಗುತ್ತೆ. ರೂಪಾಂತರ ಹೊಂದುತ್ತಿರುವ ಇಂದಿನ ಸಾಮಾಜಿಕ– ಸಾಂಸ್ಕೃತಿಕ ಸನ್ನಿವೇಶದಲ್ಲಿ ಯಾವ ಸೃಷ್ಟಿಯೂ ಯುವಪೀಳಿಗೆಗೆ ಕುತೂಹಲ ಹುಟ್ಟಿಸುತ್ತಿಲ್ಲ’ ಎಂದು ಕವಯತ್ರಿ ಎಚ್.ಎನ್.ಆರತಿ ವ್ಯಥೆಪಟ್ಟರು.
‘ಹೊಸ ಚಿಗುರನ್ನು ವಯಸ್ಸಿನ ಬಂಧನಕ್ಕೆ ಮೀಸಲಿಡಲು ಆಗುವುದಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಗೋಷ್ಠಿಗೆ ತೆರೆಬಿತ್ತು.
ಸಾಹಿತ್ಯ ಮತ್ತು ಬಿಯರ್
ಸಾಹಿತ್ಯ ಉತ್ಸವದ ಪ್ರಧಾನ ವೇದಿಕೆಯಿಂದ ತುಸು ಮುಂದೆ ಸಾಗಿದರೆ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. ಅಲ್ಲಿ ದೋಸೆಯಿಂದ ಹಿಡಿದು ನೂಡಲ್ಸ್ವರೆಗೆ ತಿಂಡಿ–ತಿನಿಸು ಲಭ್ಯವಿದೆ. ಇದೆಲ್ಲದರ ಜೊತೆಗೆ, ದೇಹ ಮತ್ತು ಮನಸ್ಸಿಗೆ ಕಚಗುಳಿ ಇಡುವ ಬಿಯರ್ ಮಾರಾಟದ ವ್ಯವಸ್ಥೆಯೂ ಇದೆ!
ಸಾಹಿತ್ಯೋತ್ಸವದಲ್ಲಿ ಕೇಳಿಸಿದ್ದು...
ಮಾಹಿತಿ ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ನೀವು ಆ್ಯಂಡ್ರಾಯ್ಡ್ ತಂತ್ರಾಂಶ ಅಭಿವೃದ್ಧಿಪಡಿಸುವವರ ಸಮ್ಮೇಳನ ಮಾಡಬಹುದು ಅಂದುಕೊಂಡಿದ್ದೆ. ಆದರೆ ಬೆಂಗಳೂರು ಸಾಹಿತ್ಯ ಉತ್ಸವ ಈಗಾಗಲೇ ಹೆಸರುವಾಸಿಯಾಗಿದೆ. ಇದು ನಿಜಕ್ಕೂ ಸೋಜಿಗ.
–ಚೇತನ್ ಭಗತ್, ಲೇಖಕ
ಈ ಉತ್ಸವದಲ್ಲಿ ವಾಣಿಜ್ಯ ಉದ್ದೇಶವಿಲ್ಲ. ಇಲ್ಲಿ ನೈಜ ಪ್ರಜಾಪ್ರಭುತ್ವ ಇದೆ. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳ ನಂತರವೂ ನಾವು ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸಿದ್ದೇವೆ. ಆದರೆ ಇಲ್ಲಿ ಆ ಭಾಗದ ಸಂವೇದನೆಗಳಿಗೆ ಅವಕಾಶ ದೊರೆತಿದೆ.
– ಶೋಭಾ ಡೇ, ಅಂಕಣಕಾರ್ತಿ
ಏರೋ ಇಂಡಿಯಾ ಕಾರ್ಯಕ್ರಮದಲ್ಲಿ 600 ಶಸ್ತ್ರಾಸ್ತ್ರ ಕಂಪೆನಿಗಳು ಪಾಲ್ಗೊಂಡಿದ್ದನ್ನು ಪ್ರತಿಭಟಿಸಲು ನಾನು ಬೆಂಗಳೂರಿಗೆ ಬಂದಿದ್ದೆ. ಪ್ರಜಾಪ್ರಭುತ್ವ ಇರುವ ರಾಷ್ಟ್ರದ ಒಂದು ರಾಜ್ಯದಿಂದ ನಾನು ಬಂದಿರುವೆ. ನನ್ನ ರಾಜ್ಯದ ಪ್ರಜೆಗಳಿಗೆ ಸಂವಿಧಾನ ನೀಡಿರುವ ಹಕ್ಕುಗಳು ದೊರೆತಿಲ್ಲ. ನನ್ನ ಮೇಲೆ ಅನುಮಾನ ಬಂದರೆ ಸೈನಿಕರು ನನ್ನ ದೇಹಕ್ಕೆ ಗುಂಡಿಕ್ಕಿ ಸಾಯಿಸಬಹುದು.
– ಬಿನಾಲಕ್ಷ್ಮಿ ನೆಪ್ರಂ, ಮಾನವ ಹಕ್ಕುಗಳ ಕಾರ್ಯಕರ್ತೆ (ಮಣಿಪುರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.