ADVERTISEMENT

‘ಅಮ್ಮಾ ನನಗೆ ಕೆಲ್ಸ ಸಿಕ್ತು’

ಮಹಾರಾಣಿ ಕಾಲೇಜಿನ ಉದ್ಯೋಗ ಮೇಳದಲ್ಲಿ ಮೇರೆಮೀರಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಜೂನ್ 2014, 19:30 IST
Last Updated 28 ಜೂನ್ 2014, 19:30 IST
ನಗರದ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಹೆಸರು ನೋಂದಾಯಿಸಿಕೊಂಡ ಉದ್ಯೋಗಾಕಾಂಕ್ಷಿಗಳು	–ಪ್ರಜಾವಾಣಿ ಚಿತ್ರ
ನಗರದ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಹೆಸರು ನೋಂದಾಯಿಸಿಕೊಂಡ ಉದ್ಯೋಗಾಕಾಂಕ್ಷಿಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಮ್ಮಾ ನನಗೆ ಕೆಲ್ಸ ಸಿಕ್ತು; ಸಂಬಳವೂ ಚೆನ್ನಾಗಿದೆ’ –ಕೆಲವೇ ವಾರಗಳ ಹಿಂದೆ ಬಿ.ಕಾಂ ಪದವಿ ಪಡೆದ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾಗೆ ಶನಿವಾರ ಉದ್ಯೋಗ ನೇಮಕಾತಿ ಪತ್ರ ಸಿಕ್ಕೊಡನೆ ಮೊಬೈಲ್‌ನಿಂದ ಮೊದಲು ಅವರ ಅಮ್ಮನಿಗೆ ಕರೆ ಹೋಗಿತ್ತು. ಚೈತ್ರಾ ಅವರಿಗೆ ಉದ್ಯೋಗ ಸಿಕ್ಕ ಸಂಗತಿಯನ್ನು ಅತ್ತಲಿನಿಂದ ಬಂದ ಧ್ವನಿ ನಂಬಲು ಸುತಾರಾಂ ತಯಾರಿರಲಿಲ್ಲ.

‘ಉದ್ಯೋಗ ಸಿಕ್ಕಿದ್ದು ನಿಜ, ಸೋಮವಾರವೇ ಕೆಲಸಕ್ಕೆ ಹಾಜರಾಗಬೇಕು’ ಎಂದು ಅಮ್ಮನನ್ನು ನಂಬಿಸುವಷ್ಟ­ರಲ್ಲಿ ಚೈತ್ರಾ ಸುಸ್ತು ಹೊಡೆದಿದ್ದರು. ಇದು ಅವರೊಬ್ಬರ ಕಥೆಯಷ್ಟೇ ಅಲ್ಲ, ಮಹಾರಾಣಿ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ ನೂರಾರು ವಿದ್ಯಾರ್ಥಿ­ನಿಯರ ಅನುಭವ.

ಸಮಾಜದ ಕೆಳಸ್ತರದ ಕುಟುಂಬಗಳ ಮಕ್ಕಳೇ ಹೆಚ್ಚಾಗಿ ಓದಲು ಬರುವ ಈ ಸರ್ಕಾರಿ ಕಾಲೇಜಿನಲ್ಲಿ ನೇಮಕಾತಿ ಪತ್ರ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿನಿ ಮೊಗದಲ್ಲೂ ಸಾವಿರ ವಾಟ್‌ ಬಲ್ಬು ಹೊತ್ತಿ ಉರಿದ ಸಂಭ್ರಮ. ಒಟ್ಟಾರೆ 700 ಪದವೀಧರರು ಶನಿವಾರ ಉದ್ಯೋಗ ಪಡೆದುಕೊಂಡರು. ಕನಿಷ್ಠ ₨ 16,000ದಿಂದ ಗರಿಷ್ಠ ₨ 24,000ವರೆಗೆ ವೇತನದ ಉದ್ಯೋಗವೇ ಅವರಿಗೆ ಸಿಕ್ಕಿತು.

ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಲ್ಲದೆ ರಾಜ್ಯದ ವಿವಿಧ ಭಾಗಗಳಿಂದಲೂ ಪದವೀಧರರು ಮೇಳದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಬಿಎ, ಬಿ.ಕಾಂ, ಬಿಎಸ್ಸಿ, ಬಿಬಿಎ, ಎಂಬಿಎ ಪದವೀಧರರು ಉದ್ಯೋಗ ಪಡೆದವರ ಪಟ್ಟಿಯಲ್ಲಿ ಸೇರಿದ್ದರು.

‘ನನಗೆ ಕೆಲಸ ಸಿಕ್ಕಿರುವುದನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಅದೂ ಅಷ್ಟೊಂದು ದೊಡ್ಡ ಕಂಪೆನಿಯಲ್ಲಿ’ ಎಂದು ಹೇಳುತ್ತಿದ್ದರು, ಹಿಂದೂಜಾ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿದ ಶ್ರುತಿ. ಸಂಜೆ ವಿದ್ಯಾರ್ಥಿ­ಗಳಿಗೆ ನೇಮಕಾತಿ ಪತ್ರ ಕೊಡಿಸುವಾಗ ಮೇಳದ ಸಂಘಟನಾ ಕಾರ್ಯದರ್ಶಿ ಡಾ.ವಿ.ಅನುರಾಧಾ ಮತ್ತು ಪ್ಲೇಸ್‌ಮೆಂಟ್‌ ಅಧಿಕಾರಿ ಡಾ. ಡಿ.ಗೋವಿಂದಪ್ಪ ಅವರಿಗೂ ಎಲ್ಲಿಲ್ಲದ ಖುಷಿ.

ಗುರುವೃಂದದ ಶ್ರಮ: ಬಡ ಕುಟುಂಬಗಳ ವಿದ್ಯಾರ್ಥಿ­ನಿಯರೇ ಹೆಚ್ಚಾಗಿರುವ ಕಾರಣ, ಅವರಿಗೆಲ್ಲ ಸ್ವಾವ­ಲಂಬನೆ ದಾರಿಯನ್ನು ಒದಗಿಸಬೇಕು ಎಂಬ ಆಕಾಂಕ್ಷೆ­ಯಿಂದ ಕಾಲೇಜಿನ ಉಪನ್ಯಾಸಕ ವೃಂದ ಸೇರಿಕೊಂಡು ಆಯೋಜಿಸಿದ ಉದ್ಯೋಗ ಮೇಳ ಇದಾಗಿತ್ತು. ಪ್ರತಿಯೊಬ್ಬರೂ ವಂತಿಗೆ ಹಾಕಿ, ಮೇಳದ ಖರ್ಚಿಗೆ ಹಣ ಹೊಂದಿಸಿದ್ದರು. ಉದ್ಯೋಗ ಮತ್ತು ತರಬೇತಿ ಇಲಾಖೆ ಅಧಿಕಾರಿಗಳ ಸಹಕಾರವೂ ಅವರಿಗೆ ಸಿಕ್ಕಿತು.

ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಎಲ್ಲ ದೊಡ್ಡ ಕಂಪೆನಿಗಳ ಮುಖ್ಯಸ್ಥರನ್ನು ಸಂಪರ್ಕಿಸಿ, ಅವರ ಮನ ಒಲಿಸಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಯಿತು. ‘700 ಜನ ಸ್ಥಳದಲ್ಲೇ ಕೆಲಸ ಪಡೆದರೆ, ಇನ್ನೂ 300 ಜನ ಎರಡನೇ ಸಂದರ್ಶನಕ್ಕೆ ಆಯ್ಕೆಯಾದರು. ಕಂಪೆನಿಗಳ ಕಚೇರಿ­ಯಲ್ಲೇ ಅವರ ಎರಡನೇ ಸಂದರ್ಶನ ನಡೆಯಲಿದ್ದು, ಬಹುತೇಕರು ಕೆಲಸ ಪಡೆಯುವುದು ಖಚಿತವಾಗಿದೆ’ ಎಂದು ಅನುರಾಧಾ ಹೆಮ್ಮೆಯಿಂದ ಹೇಳಿದರು.

‘ಸುಲಭವಾಗಿ ಕೆಲಸ ಸಿಕ್ಕಿದೆ. ವೃತ್ತಿಪರ ಮನೋ­ಭಾವ­ದಿಂದ ಕೆಲಸ ಮಾಡಬೇಕು. ಕಂಪೆನಿಗಳ ಮುಖ್ಯಸ್ಥರ ವಿಶ್ವಾಸ ಗಳಿಸಬೇಕು’ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಬಿ.ಜಿ. ನಂದಕುಮಾರ್‌ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.