ಬೆಂಗಳೂರು: ‘ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ವ್ಯಾಪಾರದ ಸರಕಾಗಿ ಬಳಸಿಕೊಳ್ಳುತ್ತಿರುವ ಕಾರ್ಪೊರೇಟ್ ವಲಯದ ನೀತಿಯನ್ನು ವಿರೋಧಿಸಲು ಮಂಗಳೂರಿನಲ್ಲಿ ಡಿ.13 ಹಾಗೂ 14 ರಂದು ‘ಜನನುಡಿ–2014’ ಸಾಹಿತ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನ ‘ಅಭಿಮತ’ ಸಂಸ್ಥೆಯ ವತಿಯಿಂದ ಸಮಾವೇಶ ನಡೆಯಲಿದೆ. ಸಾಹಿತಿಗಳು, ಕವಿಗಳು, ವಿಚಾರವಾದಿಗಳು ಭಾಗವಹಿಸಲಿದ್ದಾರೆ. ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿನ ವಿದ್ಯಮಾನಗಳು, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ನೈತಿಕತೆಯ ಕುಸಿತ ಸೇರಿದಂತೆ ಹಲವು ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ’ ಎಂದರು.
‘ಕಾರ್ಪೊರೇಟ್ ವಲಯವು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಮುಖವಾಡವನ್ನಾಗಿ ಬಳಸಿಕೊಳ್ಳುತ್ತಿದೆ. ಜನಸಂವೇದನೆ ಇರುವ ಸಾಹಿತ್ಯವನ್ನು ನಾಶ ಮಾಡಿ, ಶೋಷಕ ಮೌಲ್ಯಗಳ ಸಾಹಿತ್ಯವನ್ನು ಜನರ ಮೇಲೆ ಬಲವಂತವಾಗಿ ಹೇರಲು ಹೋರಟಿದೆ’ ಎಂದು ಆರೋಪಿಸಿದರು.
ಲೇಖಕಿ ಕೆ. ನೀಲಾ, ಹಿರಿಯ ರಂಗಕರ್ಮಿ ಟಿ.ಸುರೇಂದ್ರ ರಾವ್, ಚಿತ್ರ ನಿರ್ದೇಶಕ ಟಿ.ಕೆ.ದಯಾನಂದ, ಎಸ್ಎಫ್ಐ ರಾಜ್ಯ ಘಟಕದ ಅಧ್ಯಕ್ಷ ಅನಂತ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಮಡೆಮಡೆ ಸ್ನಾನ, ಸಂಸ್ಕೃತಿ: ಕಳಂಕ
ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು ಪ್ರಚಾರಕ್ಕಾಗಿ ಮಡೆ ಮಡೆ ಸ್ನಾನವನ್ನು ವಿರೋಧಿಸುತ್ತಿದ್ದಾರೆ ಎಂಬುದು ತಪ್ಪು ಗ್ರಹಿಕೆಯಾಗಿದೆ. ಮೂಢನಂಬಿಕೆ, ಅನಿಷ್ಟ ಆಚರಣೆಗಳ ವಿರುದ್ಧ ಅವರು ಹೋರಾಟ ನಡೆಸುತ್ತಿದ್ದಾರೆ. ಮಡೆ ಮಡೆ ಸ್ನಾನವು ಭಾರತ ಸಂಸ್ಕೃತಿಗೆ ಅಂಟಿದ ಕಳಂಕವಾಗಿದೆ’ ಎಂದು ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.