ಬೆಂಗಳೂರು: ‘ಜರ್ಮನ್ ಭಾಷೆಯಲ್ಲಿ ಬಿ.ಇಡಿ ಕೋರ್ಸ್ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿದೇಶಿ ಭಾಷಾ ವಿಭಾಗದ ಅಧ್ಯಕ್ಷ ಡಾ.ಜೀವನ್ ಕುಮಾರ್ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ವಿದೇಶಿ ಭಾಷಾ ವಿಭಾಗದ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಭಾಷಾ ಮೇಳದಲ್ಲಿ ಅವರು ಮಾತನಾಡಿದರು.
ಕೇಂದ್ರೀಯ ವಿದ್ಯಾಲಯಗಳಲ್ಲಿ ಐಚ್ಛಿಕವಾಗಿ ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚಿನ ವಿದ್ಯಾರ್ಥಿಗಳು ಜರ್ಮನ್ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜರ್ಮನ್ ಭಾಷೆಯಲ್ಲಿ ಬಿ.ಇಡಿ ಕೋರ್ಸ್ ಆರಂಭಿಸುವಂತೆ ಜರ್ಮನ್ ಎಂಬೆಸಿಯಿಂದಲೂ ಮನವಿ ಬಂದಿದೆ ಎಂದರು.
‘ಕೋರ್ಸ್ ಆರಂಭಿಸುವ ಬಗ್ಗೆ ಜರ್ಮನ್ ಎಂಬೆಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಜರ್ಮನ್ ಭಾಷೆ ಬೋಧನೆಗೆ ಪರಿಣಿತ ಪ್ರಾಧ್ಯಾಪಕರ ಕೊರತೆ ಇದೆ. ಹೀಗಾಗಿ ಪ್ರಾಧ್ಯಾಪಕರಿಗೆ ತರಬೇತಿ ಮತ್ತು ಪಠ್ಯಕ್ರಮ ಸಿದ್ಧಪಡಿಸಲು ನೆರವು ನೀಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಚರ್ಚಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೋರ್ಸ್ ಆರಂಭಿಸಲಾಗುವುದು’ ಎಂದರು.
ಜರ್ಮನಿಯ ಉಪ ಕಾನ್ಸಲ್ ಜನರಲ್ ಆಂಡ್ರಿಯಾ ಕ್ರೈಸ್ಟ್ ಮಾತನಾಡಿ, ‘ವಿಶ್ವದ ವಿವಿಧ ದೇಶಗಳಲ್ಲಿ ಜರ್ಮನ್ ಭಾಷೆ ಮಾತನಾಡುವ ಮತ್ತು ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ. ಜರ್ಮನ್ ಕಲಿಕೆಯಿಂದ ಹೆಚ್ಚಿನ ಉದ್ಯೋಗಾವಕಾಶ ಸಿಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.