ADVERTISEMENT

‘ಪತ್ರಕರ್ತರ ಬೆಳೆಸಿದ ಎಂ.ಬಿ. ಸಿಂಗ್‌’

90 ತುಂಬಿದ ಹಿರಿಯ ಸಾಧಕನಿಗೆ ಒಡನಾಡಿಗಳಿಂದ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 24 ಮೇ 2015, 20:05 IST
Last Updated 24 ಮೇ 2015, 20:05 IST

ಬೆಂಗಳೂರು: ಹಿರಿಯ ಪತ್ರಕರ್ತ ಎಂ.ಬಿ. ಸಿಂಗ್‌ ಅವರಿಗೆ 90 ತುಂಬಿದ ನೆಪದಲ್ಲಿ ಅವರ ಒಡನಾಡಿಗಳೆಲ್ಲ ಸೇರಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಅವರ ಬದುಕು– ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕೃತಿಯನ್ನೂ ಬಿಡುಗಡೆ ಮಾಡಲಾಯಿತು.

ವಿಕಾಸ ಪ್ರಕಾಶನ ಸಂಸ್ಥೆಯಿಂದ ಪ್ರೆಸ್‌ಕ್ಲಬ್‌ ಸಭಾಂಗಣದಲ್ಲಿ ಭಾನುವಾರ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಜಿ.ಎನ್‌. ರಂಗನಾಥ ರಾವ್‌, ‘ಅನೇಕ ಜನ ಲೇಖಕರು ಮತ್ತು ಪತ್ರಕರ್ತರನ್ನು ಬೆಳೆಸಿದ ಕೀರ್ತಿ ಎಂ.ಬಿ. ಸಿಂಗ್‌ ಅವರಿಗೆ ಸಲ್ಲುತ್ತದೆ’ ಎಂದರು.

‘ಸಿಂಗ್‌ ಅವರು ನಿಂತ ನೀರಾಗಿದ್ದ ನಿಯತಕಾಲಿಕೆ ಪತ್ರಿಕೋದ್ಯಮಕ್ಕೆ ಹೊಸ ರಕ್ತ, ಹೂರಣ ನೀಡಿ ಹೊಸ ದಿಕ್ಕು ತೋರಿಸಿದರು’ ಎಂದು ಹೇಳಿದರು.

‘ಸಿಂಗ್‌ ಅವರಲ್ಲಿ ನೆಲಸಂಸ್ಕೃತಿ, ವೈಎನ್‌ಕೆ ಅವರಲ್ಲಿ ನವ್ಯ ಸಂಸ್ಕೃತಿ ಮತ್ತು ಖಾದ್ರಿ ಶಾಮಣ್ಣನವರಲ್ಲಿ ಹೋರಾಟದ ಸಂಸ್ಕೃತಿ– ಹೀಗೆ ‘ಪ್ರಜಾವಾಣಿ’ಯಲ್ಲಿ ಬಹುಸಂಸ್ಕೃತಿ ಇತ್ತು’ ಎಂದು ಹೇಳಿದರು.

ಇತಿಹಾಸ ತಜ್ಞ ಪ್ರೊ. ಷ. ಶೆಟ್ಟರ್‌, ‘ತಾವು ಹಿಂದೆ ಉಳಿದು, ಅನೇಕ ಜನ ಪತ್ರಕರ್ತರು, ಲೇಖಕರನ್ನು ಮುಂಚೂಣಿಗೆ ತಂದವರು ಸಿಂಗ್‌’ ಎಂದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರು ಮಾತನಾಡಿ, ‘ಸಿಂಗ್‌ ಅವರು ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆ ಅಪಾರ. ಆದರೆ, ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಹಿರಿಯ ಪತ್ರಕರ್ತ ಎಚ್‌.ಎನ್‌. ಆನಂದ್‌, ಚಿತ್ರ ನಿರ್ದೇಶಕ ಕೆ.ಎಸ್‌.ಎಲ್‌. ಸ್ವಾಮಿ (ರವಿ) ಅವರು ಮಾತನಾಡಿದರು.

ಕಲಾವಿದ ಜಿ.ಕೆ. ಸತ್ಯ ಅವರು ಎಂ.ಬಿ. ಸಿಂಗ್‌ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಭಾವುಕರಾಗಿ ಕಣ್ಣೀರಿಟ್ಟರು.

‘ಎಲ್ಲರ ಜೊತೆಗೆ ಮಾನವೀಯ ಸಂಬಂಧ ಇಟ್ಟುಕೊಂಡವರು ಸಿಂಗ್‌. ಅವರು ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ’ ಎಂದು ಹೇಳಿದರು.

‘ನನ್ನ ಸಾಧನೆ ನಿಮಗೆ ಸೇರಿದ್ದು’ ಎಂದು ಎಂ.ಬಿ.ಸಿಂಗ್‌ ಚುಟುಕಾಗಿ ಪ್ರತಿಕ್ರಿಯಿಸಿದರು.

‘ಎಂ.ಬಿ. ಸಿಂಗ್‌–90 ಕನ್ನಡ  ಪತ್ರಿಕೋದ್ಯಮದ ಕಟ್ಟಾಳು’ ಕೃತಿ ಬಿಡುಗಡೆ ಮಾಡಲಾಯಿತು.

‘ಮಯೂರ’ ಮಾಸಪತ್ರಿಕೆಯ ಸಹಾಯಕ ಸಂಪಾದಕಿ ಆರ್‌. ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.  ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕ ರಘುನಾಥ ಚ.ಹ. ಕಾರ್ಯಕ್ರಮ ನಡೆಸಿಕೊಟ್ಟರು.

ಸಿಂಗ್‌ ಅವರ ಪುತ್ರಿ ಕಲ್ಪನಾ ಸಿಂಗ್‌ ಅವರು ಸ್ವರಚಿತ ಇಂಗ್ಲಿಷ್‌ ಕವಿತೆ ಓದಿದರು. ಎಂ.ಬಿ. ಸಿಂಗ್‌ ಅವರ ಕುಟುಂಬ ಸದಸ್ಯರು, ಅವರ ಒಡನಾಡಿಗಳು ಹಾಗೂ ಹಿರಿಯ, ಕಿರಿಯ ಪತ್ರಕರ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.