ಬೆಂಗಳೂರು: ‘ಬೇಂದ್ರೆ ಅವರ ಕಾವ್ಯದಲ್ಲಿ ಯಾವುದೇ ಸಿದ್ಧಾಂತವಿಲ್ಲ. ಅದರಲ್ಲಿರುವುದು ರಸಸತ್ವ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ದ.ರಾ.ಬೇಂದ್ರೆ ಕಾವ್ಯಕೂಟವು ಬೇಂದ್ರೆ ಅವರ 120ನೇ ಹುಟ್ಟುಹಬ್ಬದ ಅಂಗವಾಗಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೂಟದ ಅಧ್ಯಕ್ಷ ಡಾ.ಜಿ.ಕೃಷ್ಣಪ್ಪ ಆವರ ‘ತಿರುತಿರುಗಿಯು ಹೊಸತಾಗಿರಿ –ನಾದಲೀಲೆಯ ವಿಮರ್ಶೆ’ ಮತ್ತು ‘ಬೇಂದ್ರೆ ಕಾವ್ಯದಲ್ಲಿ ಶರಣ ಚಿಂತನೆ’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
‘ಬೇಂದ್ರೆ ಅವರು ಯಾರನ್ನೂ ಅನುಕರಿಸಲಿಲ್ಲ. ಅವರು ಅಲ್ಲಮ ಪ್ರಭುವಿನ ವಚನಗಳಿಂದ ಪ್ರೇರೇಪಿತರಾಗಿ ಕಾವ್ಯ ರಚನೆ ಮಾಡಿದ್ದಾರೆ. ಅವರ ಕಾವ್ಯದಲ್ಲಿ ಅದನ್ನು ಕಾಣಬಹುದು’ ಎಂದರು. ‘ಬೆಂದ್ರೆ ಅವರ ಕಾವ್ಯದ ಬಗ್ಗೆ ಹಲವು ಲೇಖಕರು ಬರೆದಿದ್ದಾರೆ. ಆದರೆ, ಜಿ.ಕೃಷ್ಣಪ್ಪ ಅವರು ಬೇಂದ್ರೆ ಕಾವ್ಯದ ಕುರಿತು ಬರೆದಿರುವ ಕೃತಿಗಳಲ್ಲಿ ಹೊಸ ಅರ್ಥಗಳನ್ನು ಕಾಣಬಹುದು’ ಎಂದರು.
‘ಕೃಷ್ಣಪ್ಪ ಅವರು ಬೇಂದ್ರೆ ಅವರ ಜೀವನ ಮತ್ತು ಸಾಹಿತ್ಯವನ್ನು ಅಳವಾಗಿ ತಿಳಿದುಕೊಂಡಿದ್ದಾರೆ. ಅವರು ಬೇಂದ್ರೆಯವರ ಕಾವ್ಯವನ್ನು ಯಾವ ಫಲಾಪೇಕ್ಷೆಯೂ ಇಲ್ಲದೆ ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ’ ಎಂದರು. ಕಾರ್ಯಕ್ರಮದಲ್ಲಿ ಬೇಂದ್ರೆ ನೆನಪಿನ ಲೇಖನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.