ADVERTISEMENT

‘ಮೇಷ್ಟ್ರಿಗೆ ವಿಧಿವಿಧಾನದ ಮೋಹವಿತ್ತು’

ಸಾಹಿತ್ಯ ಅಕಾಡೆಮಿಯಿಂದ ‘ಅನಂತ ನೆನಪು’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2014, 19:48 IST
Last Updated 5 ಸೆಪ್ಟೆಂಬರ್ 2014, 19:48 IST

ಬೆಂಗಳೂರು: ‘ವಿಧಿವಿಧಾನಗಳ ಬಗ್ಗೆ ಡಾ.­ಯು.­ಆರ್‌.ಅನಂತಮೂರ್ತಿ ಅವರಿಗೆ ಮೋಹ ಇತ್ತು. ಬಡ ಬ್ರಾಹ್ಮ­ಣರು ಮಂತ್ರ ಹೇಳುವುದನ್ನು ಕಂಡರೆ ಅಲ್ಲೇ ನಿಂತು ಪೂರ್ತಿ ಕೇಳಿಸಿಕೊಳ್ಳು­ತ್ತಿ­ದ್ದರು’ ಎಂದು ಕವಯಿತ್ರಿ ಚ.­ಸರ್ವ­ಮಂಗಳ ನೆನಪಿಸಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಾಹಿತ್ಯ ಅಕಾ­ಡೆಮಿಯ ಆಶ್ರಯದಲ್ಲಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಅನಂತ ನೆನಪು’ ಕಾರ್ಯಕ್ರಮ­ದಲ್ಲಿ ಅವರು ಅನಂತಮೂರ್ತಿ ಅವ­ರೊಂ­ದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
‘ನಾನು ಸತ್ತ ಬಳಿಕ ಇದೇ ವಿಧಿವಿಧಾನ ಅನುಸರಿಸಿ ಎಂದು ಅನಂತಮೂರ್ತಿ ಅವರು ಎಂದೂ ಹೇಳಿಲ್ಲ. ವಿಲ್‌ ಸಹ ಬರೆದಿಟ್ಟಿಲ್ಲ.

ನಾನು ಸತ್ತ ಬಳಿಕ ಸಮಾಜಕ್ಕೆ ಸೇರಿದವನು ಎಂದು ಮೇಷ್ಟ್ರು ಹೇಳುತ್ತಿದ್ದರು. ಸರ್ಕಾರ ಮುತುವರ್ಜಿ ವಹಿಸಿ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಿದೆ’ ಎಂದರು. ‘ಅಗ್ನಿಸ್ಪರ್ಶದಿಂದಲೇ ದಹನ ಆಗಬೇಕು ಎಂದು ಹೇಳುತ್ತಿ­ದ್ದರು. ಅಗ್ನಿ ಸ್ಪರ್ಶ, ಭೂಶಾಂತಿ ಎಂಬ ಪದಗಳೇ ಅವರಿಗೆ ತುಂಬಾ ಇಷ್ಟ ಆಗುತ್ತಿತ್ತು. ವಿದ್ಯುತ್ ಚಿತಾಗಾರದಲ್ಲಿ ಮಿತ್ರ­ರೊಬ್ಬರ ಅಂತ್ಯಕ್ರಿಯೆ ನಡೆಸಿದಾಗ ಬೇಸರ ಪಟ್ಟುಕೊಂಡಿ­ದ್ದರು. ಆದರೆ, ಅರ್ಥ ಗೊತ್ತಿಲ್ಲದ ಮೂಢ ಆಚರಣೆಗಳನ್ನು ಅವರು ವಿರೋಧ ಮಾಡುತ್ತಿ­ದ್ದರು’ ಎಂದು ಅವರು ನೆನಪಿಸಿಕೊಂಡರು.

‘ಕನ್ನಡದಲ್ಲಿ ಅವರಷ್ಟು ವಾದ ವಿವಾದ­ಗಳನ್ನು ಎದು­ರಿಸಿ­ದವರು, ದ್ವೇಷಕ್ಕೆ ಒಳಗಾದವರು  ಯಾರೂ ಇಲ್ಲ. ಆದರೆ, ಅವರು ಯಾರನ್ನೂ ದ್ವೇಷಿ­ಸ­­ಲಿಲ್ಲ. ಅವರು ತೆರೆದ ಪುಸ್ತಕದ ರೀತಿ­ಯಲ್ಲಿ ಬದುಕಿದರು. ಅಂತಹ ಸಾಹಿತಿ ಭಾರ­ತೀಯ ಸಾಹಿತ್ಯ­ದಲ್ಲಿ ಬಹಳ ಅಪರೂಪ’ ಎಂದು ಅವರು ಬಣ್ಣಿಸಿದರು.

ಸಾಹಿತಿ ಪ್ರೊ.ಕೆ.ಬಿ.ಸಿದ್ದಯ್ಯ ಮಾತ­ನಾಡಿ, ‘ಅನಂತಮೂರ್ತಿ ಅವರು ಸ್ವಾಭಿ­ಮಾನದಿಂದ ಬದು­ಕು­ವುದನ್ನು ನನಗೆ ಕಲಿಸಿದ­ವರು. ಪರಮ ವಿನಯ ಅವರಲ್ಲಿ ಇತ್ತು. ಅವರು ನಿರ್ಭೀತಿ­ಯಿಂ­ದಲೇ ಬದುಕಿ­ದರು’ ಎಂದರು. ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತ­ನಾಡಿ, ‘ಅನಂತ­ಮೂರ್ತಿ ಅವರು ಅತ್ಯಂತ ಹೃದಯ­ವಂತ ಮನುಷ್ಯ.

ಅವರ  ನಿರ್ಗಮನದಿಂದ ಒಂದು ಯು­ಗದ ಅಂತ್ಯ ಆಯಿತು ಅನಿಸುತ್ತದೆ. ಭವಿಷ್ಯದಲ್ಲಿ ಒಳ್ಳೆಯ ಶಿಕ್ಷಕರು, ಸಾಹಿತಿಗಳು ಬರಬಹುದು. ಆದರೆ ಅನಂತಮೂರ್ತಿ ಅವ­ರಂ­ತಹ ವ್ಯಕ್ತಿಗಳು ಬರಲಾರರು’ ಎಂದು ಅಭಿಪ್ರಾಯಪಟ್ಟರು. ಮಾಜಿ ಸಚಿವ ಕೆ.ಎಚ್‌.ಶ್ರೀನಿವಾಸ್‌ ಮಾತನಾಡಿ, ‘ಶಿಷ್ಯ ವಾತ್ಸಲ್ಯ ಹಾಗೂ ಪರಮ ಶಿಸ್ತು ಅನಂತಮೂರ್ತಿ ಅವರಲ್ಲಿ ಧಾರಾಳವಾಗಿ ಇತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.