ಬೆಂಗಳೂರು: ‘ಇಂದಿನ ಕಾವ್ಯ ಒಂದು ಸಮುದಾಯದ ಪರ ವಕಾಲತ್ತು ವಹಿಸುತ್ತಿದೆ. ಮಹಿಳೆಯರು ಸ್ತ್ರೀಪರವಾದ ಕವನ ಮಾತ್ರ ಬರೆಯುವುದು, ದಲಿತರು ದಲಿತರ ಪರವಾದ ಕವಿತೆ ಮಾತ್ರ ಬರೆಯುವುದನ್ನು ಕಾಣುತ್ತಿದ್ದೇವೆ. ಕಾವ್ಯ ಇಂಥ ಸಂಗತಿಗಳನ್ನು ದಾಟಿ ನಿಲ್ಲಬೇಕಾಗಿದೆ. ಲೋಕದ ಬಗ್ಗೆ ಆಲೋಚನೆ ಮಾಡುವ ಕಾವ್ಯ ಮೂಡಿಬರಬೇಕಿದೆ. ಈ ಬಗ್ಗೆ ಕವಿಗಳು ಸ್ವವಿಮರ್ಶೆ ಮಾಡಿಕೊಳ್ಳಬೇಕು’
–ಹೀಗೆಂದು ಸಲಹೆ ನೀಡಿದ್ದು ಹಿರಿಯ ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್.
ಜೆ.ಪಿ.ನಗರದಲ್ಲಿರುವ ಕಾವಿಮನೆಯಲ್ಲಿ ಭಾನುವಾರ ‘ಶೂದ್ರ’ ಸಾಹಿತ್ಯಕ ಪತ್ರಿಕೆ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ (ಜಿಎಸ್‌ಎಸ್) ಗೌರವ ಕಾವ್ಯ ಸ್ಪರ್ಧೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ನವ್ಯ ಕಾವ್ಯ ಸಂದರ್ಭ ಕುರಿತು ಉಪನ್ಯಾಸ ನೀಡಿದ ಅವರು, ‘ಕವಿತೆಯು ಜನರ ಹೃದಯದಿಂದ ದೂರ ಸರಿಯುತ್ತಿದೆ. ಆ ಸ್ಥಾನದಲ್ಲಿ ಕಥೆ, ಕಾದಂಬರಿ ನೆಲೆಸುತ್ತಿವೆ. ಏಕೆ ಈ ರೀತಿಯಾಗುತ್ತಿದೆ ಎಂಬ ಪ್ರಶ್ನೆ ಪ್ರಮುಖವಾಗಿ ಕವಿಗೆ ಮೂಡಬೇಕಾಗಿದೆ’ ಎಂದರು.
‘ಶಾಶ್ವತವಾಗಿ ಉಳಿಯುವಂಥ ಕವಿತೆ ಮೂಡಿಬರಬೇಕಾದ ಅಗತ್ಯವೂ ಇದೆ. ಕೆಲವರು ಹೊರತರುವ ಕವನ ಸಂಕಲನ ಪುಸ್ತಕದಲ್ಲಿ ಎಲ್ಲವೂ ಒಂದೇ ದಾಟಿಯ ಕವಿತೆಗಳಿರುತ್ತವೆ. ಇಂಥವರು ತಮ್ಮ ಸುತ್ತಮುತ್ತಲಿನ ಲೋಕಕ್ಕೂ ಕಿವಿ ತೆರೆದಿರುವುದಿಲ್ಲ. ಪಾರಂಪರಿಕ ಲೋಕಕ್ಕೂ ಕಿವಿ ತೆರೆದಿರುವುದಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಕಾವ್ಯ ಪ್ರೀತಿ ಬೆಳೆಸಬೇಕು’: ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಕವಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ, ‘ಕಾವ್ಯ ಪ್ರೇಮ ಎಂಬುದು ಬದುಕಿನಲ್ಲಿ ಜೀವಂತಿಕೆ ಹಾಗೂ ರೋಮಾಂಚನವನ್ನು ಉಳಿಸುವಂಥದ್ದು. ಬದುಕಿಗೆ ಅಮೃತಕೊಡುವಂಥದ್ದು. ಸೌಂದರ್ಯ ಪ್ರೀತಿಯನ್ನು ಬೆಳೆಸುವಂಥದ್ದು. ಇದಕ್ಕೆಲ್ಲಾ ಮೂಲ ಪ್ರೇರಣೆಯಾದ ಕಾವ್ಯ ಪ್ರೀತಿ ಬೆಳೆಸುವ ಕೆಲಸ ನಡೆಯಬೇಕಾಗಿದೆ’ ಎಂದು ಸಲಹೆ ನೀಡಿದರು.
ಕವಿ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, ‘ಪ್ರಸ್ತುತ ಸನ್ನಿವೇಶದಲ್ಲಿ ಕವಿಗಳು ಹೆಚ್ಚಾಗಿದ್ದಾರೆ. ಆದರೆ, ಕವಿತೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಕವಿತೆ ಬರೆಯುವುದರಿಂದ ಆರ್ಥಿಕ ಲಾಭವೂ ಇಲ್ಲ, ಇತ್ತ ಗ್ರಾಹಕರೂ ಇಲ್ಲ ಎನ್ನುವಂಥ ಪರಿಸ್ಥಿತಿ ಉದ್ಭವಿಸಿದೆ. ಹಾಗಾಗಿ ಕಾವ್ಯ ಸಂಸ್ಕೃತಿ ಬೆಳೆಸಬೇಕಾದ ಅಗತ್ಯವಿದೆ. ಕವಿತೆಯನ್ನು ಓದಿ ಸಂತೋಷಪಡುವ ವಾತಾವರಣ ನಿರ್ಮಾಣ ಮಾಡಬೇಕಿದೆ’ ಎಂದರು.
ಕವಿ ಸಿದ್ದಲಿಂಗಯ್ಯ ಅವರು ‘ಕವಿತೆ ಓದುಗರಿಗಾಗಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ ಕವಿಗಳು ನಿರಾಸೆಗೆ ಒಳಗಾಗಬಾರದು. ಭರವಸೆಯೊಂದಿಗೆ ಬರವಣಿಗೆ ಮುಂದುವರಿಸಬೇಕು’ ಎಂದು ಹೇಳಿದರು.
ಪ್ರಬಂಧ ಸಂಕಲನಕ್ಕೆ ಪ್ರಶಸ್ತಿ: ಚಿಂತಕ ಶೂದ್ರ ಶ್ರೀನಿವಾಸ್ ಅವರು, ‘ಕಾವ್ಯವನ್ನು ಹೆಚ್ಚು ಜನರಿಗೆ ತಲುಪಿಸಬೇಕು ಎಂಬುದು ನಮ್ಮ ಉದ್ದೇಶ. 18 ವರ್ಷಗಳಿಂದ ಈ ಸ್ಪರ್ಧೆ ನಡೆಸುತ್ತಾ ಬಂದಿದ್ದೇವೆ. ಮುಂದಿನ ವರ್ಷದಿಂದ ಎ.ಎನ್.ಮೂರ್ತಿರಾವ್ ಹೆಸರಿನಲ್ಲಿ ಅತ್ಯುತ್ತಮ ಪ್ರಬಂಧ ಸಂಕಲನಕ್ಕೆ ಪ್ರಶಸ್ತಿ ನೀಡಬೇಕೆಂದು ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದರು.
ಮೂವರಿಗೆ ಪ್ರಶಸ್ತಿ
ಲೇಖಕರಾದ ಪಿ.ಚಂದ್ರಿಕಾ (‘ತಾಮ್ರ ವರ್ಣದ ತಾಯಿ’ ಕವನ ಸಂಕಲನ), ಎಂ.ಎಸ್.ರುದ್ರೇಶ್ವರಸ್ವಾಮಿ (‘ಆ ತೀರದ ಮೋಹ’ ಕವನ ಸಂಕಲನ) ಹಾಗೂ ಬಸವರಾಜ ಸೂಳಿಭಾವಿ (‘ಬಟ್ಟೆಯೆಂಬುದು ಬೆಂಕಿಯ ಹಾಗೆ’ ಕವನ ಸಂಕಲನ) ಅವರು 2012 (ಇಬ್ಬರಿಗೆ) ಹಾಗೂ 2013ನೇ ಸಾಲಿನ ಪ್ರಶಸ್ತಿ ಪುರಸ್ಕೃತರು. ಪ್ರಶಸ್ತಿ ಪತ್ರದ ಜೊತೆಗೆ ₨ 10 ಸಾವಿರ ನಗದು ಬಹುಮಾನ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.