ಬೆಂಗಳೂರು: ‘ದೇಶದ ಇತಿಹಾಸ, ಪರಂಪರೆ ಪ್ರತಿಬಿಂಬಿಸುವ ಪಳೆಯುಳಿಕೆಗಳಾಗಿರುವ ಶಿಲಾಶಾಸನಗಳನ್ನು ಜತನದಿಂದ ಸಂರಕ್ಷಿಸುವ ಕಾರ್ಯ ಆಗಬೇಕಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು.
ಪುರಾತತ್ವ ಇಲಾಖೆ ಕಸ್ತೂರಿ ಬಾ ರಸ್ತೆಯಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಬುಧವಾರ ಆಯೋಜಿಸಿದ್ದ ಬೆಂಗಳೂರು ವಸ್ತುಸಂಗ್ರಹಾಲಯದ 150ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೈಜ್ಞಾನಿಕ ಬೆಳವಣಿಗೆಗಳು ನಮ್ಮ ಪರಂಪರೆ, ಸಂಸ್ಕೃತಿಯನ್ನು ಎಲ್ಲೋ ಒಂದು ಕಡೆ ಆಕ್ರಮಿಸಿಕೊಳ್ಳುತ್ತಿರುವಂತೆ ಭಾಸವಾಗುತಿದೆ. ಈ ಹೊತ್ತಿನಲ್ಲಿ ವೈಜ್ಞಾನಿಕ ಪ್ರಗತಿಯ ಜತೆಗೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
‘ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಸಂದರ್ಭಗಳಲ್ಲಿ ಇತಿಹಾಸ ಪ್ರಜ್ಞೆ ಮೂಡಿಸುವ ಸಲುವಾಗಿ ‘ಪ್ರಾಚ್ಯ-ಪ್ರಜ್ಞೆ’ ಎಂಬ ಯೋಜನೆ ಜಾರಿಗೆ ತರಲಾಯಿತು. ಮಕ್ಕಳಿಗೆ ತಾವು ನೋಡಿದಂತಹ ಐತಿಹಾಸಿಕ ಸ್ಥಳಗಳ ಬಗ್ಗೆ ರಸಪ್ರಶ್ನೆ, ಪ್ರಶ್ನಾವಳಿ ಮುಂತಾದ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅವರಿಗೆ ಇತಿಹಾಸದ ಬಗ್ಗೆ ಸ್ಪಷ್ಟ ಆಳವಾದ ಜ್ಞಾನ ಮೂಡಿಸುವುದು ಯೋಜನೆ ಉದ್ದೇಶವಾಗಿದೆ’ ಎಂದರು.
‘ಪತ್ರಗಾರ, ಪ್ರಾಚ್ಯವಸ್ತು, ಮತ್ತು ಪರಂಪರೆ ಇಲಾಖೆಗೆ ಕಾಯಕಲ್ಪ ನೀಡುವ ಸಂಬಂಧ ಇತಿಹಾಸ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿ ಸಲಾಗುವುದು’ ಎಂದು ತಿಳಿಸಿದರು.
*
ಶಿಶು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ
‘ಅಂಗನವಾಡಿಗಳಲ್ಲಿ ನೀಡಲಾಗುತ್ತಿರುವ ಆರಂಭಿಕ ಶಿಶು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಚಿವೆ ಉಮಾಶ್ರೀ ತಿಳಿಸಿದರು. ಅಕ್ಷರ ಫೌಂಡೇಶನ್‌ನಿಂದ ಬುಧವಾರ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ‘ಅಂಗನವಾಡಿಗಳಲ್ಲಿ ಶಿಶುಗಳಿಗೆ ನೀಡಲಾಗುತ್ತಿರುವ ಆರಂಭಿಕ ಶಿಕ್ಷಣದ ಗುಣಮಟ್ಟ ಸರಿಯಿಲ್ಲ ಎಂಬುದು ಮನವರಿಕೆಯಾಗಿದ್ದು, ಅದನ್ನು ಸರಿಪಡಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.