ಬೆಂಗಳೂರು: ‘ಸಾಹಿತ್ಯೇತರ ವ್ಯಕ್ತಿ ಕೃತಿ ರಚನೆ ಮಾಡಿದಾಗ ಅಲಕ್ಷ್ಯದಿಂದ ಕಾಣಲಾಗುತ್ತಿದೆ. ಇಂತಹ ಮಡಿವಂತಿಕೆ ಹೋಗಬೇಕು’ ಎಂದು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ಬೆಂಗಳೂರು ನಾರ್ತ್ ಎಜುಕೇಷನ್ ಸೊಸೈಟಿ ಮತ್ತು ಡೆವಲಪ್‌ಮೆಂಟ್ ಫೋರಂ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಂಸದ ಎಂ.ವೀರಪ್ಪ ಮೊಯಿಲಿ ಅವರ ಎರಡನೇ ಮಹಾಕಾವ್ಯ ‘ದ್ರೌಪದಿ ಸಿರಿಮುಡಿ ಪರಿಕ್ರಮಣ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಬೇರೆ ಬೇರೆ ಕ್ಷೇತ್ರಗಳ ಅನುಭವದಿಂದ ಸಾಹಿತ್ಯ ಸೃಷ್ಟಿಯಾಗಬೇಕು. ಆಗ ಸಾಹಿತ್ಯ ಕ್ಷೇತ್ರ ಶ್ರೀಮಂತವಾಗುತ್ತದೆ’ ಎಂದರು.
‘ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸೆಕ್ಯುರಿಟಿ ಗಾರ್ಡ್, ಗಡಿಯಲ್ಲಿ ಕೆಲಸ ಮಾಡುವ ಸೈನಿಕ, ಪ್ರಯೋಗಾಲಯದಲ್ಲಿ ಸಂಶೋಧನೆ ಮಾಡುವ ವಿಜ್ಞಾನಿಯ ಅನುಭವಗಳು ಅಕ್ಷರಕ್ಕಿಳಿದರೆ ಸಾಹಿತ್ಯ ಮತ್ತಷ್ಟು ಗಟ್ಟಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ದ್ರೌಪದಿ ಮೂಲ ಭಾರತದಲ್ಲಿ ಸುಂದರಿಯಾಗಿದ್ದರೆ, ಇಲ್ಲಿ ಕಪ್ಪು ವರ್ಣದ ಮಹಿಳೆ. ಆದರೆ, ಆಧುನಿಕ ಮಹಿಳೆಯಲ್ಲಿರುವ ಸ್ತ್ರೀ ಸಂವೇದನೆ ಅವಳಲ್ಲಿದೆ. ‘ದ್ರೌಪದಿ ಸಿರಿಮುಡಿ ಪರಿಕ್ರಮಣ’ದಲ್ಲಿ ಸಮಾನತೆಯ ತತ್ವವನ್ನು ಕಾಣಬಹುದು’ ಎಂದರು.
ಹಿರಿಯ ಸಾಹಿತಿ ದೇ.ಜವರೇಗೌಡ ಮಾತನಾಡಿ, ‘ವೀರಪ್ಪ ಮೊಯಿಲಿ ಅವರು ಅತ್ಯಂತ ಸರಳ ಛಂದಸ್ಸಿನಲ್ಲಿ ಈ ಕೃತಿ ರಚಿಸಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕೃತಿ ಇದಾಗಿದೆ’ ಎಂದು ಹೇಳಿದರು.
‘ಇಡೀ ವಿಶ್ವ ಅಜ್ಞಾನದ ಅಂಧಕಾರದಲ್ಲಿದ್ದಾಗ ನಮ್ಮ ದೇಶದಲ್ಲಿ ಮಹಾಕಾವ್ಯಗಳು ಹುಟ್ಟಿಕೊಂಡವು. ನಮ್ಮ ದೇಶದಲ್ಲಿ ರಚನೆಯಾದಷ್ಟು ಮಹಾಕಾವ್ಯಗಳು ಬೇರೆ ಎಲ್ಲಿಯೂ ರಚನೆಯಾಗಿಲ್ಲ. ಮೊಯಿಲಿ ಅವರು ಸ್ತ್ರೀಯನ್ನು ಕೇಂದ್ರವಾಗಿಟ್ಟುಕೊಂಡು ಮಹಾಕಾವ್ಯ ರಚಿಸಿರುವುದು ಒಳ್ಳೆಯ ಬೆಳವಣಿಗೆ. ಇದು ಅವರ ಸ್ತ್ರೀಪರ ಕಾಳಜಿಯನ್ನು ತೋರಿಸುತ್ತದೆ’ ಎಂದರು.
ಕೃತಿಯ ಲೇಖಕ ವೀರಪ್ಪ ಮೊಯಿಲಿ ಮಾತನಾಡಿ, ‘ನನ್ನ ತಾಯಿ ಅನಕ್ಷರಸ್ಥೆ. ಆದರೆ, ಆಕೆ ನನ್ನನ್ನು ಬೆಳಗಿನ ಜಾವ ಎಬ್ಬಿಸಿ ಓದಿಸುತ್ತಿದ್ದಳು. ಆ ಅಭ್ಯಾಸ ನಿರಂತರವಾಗಿ ಮುಂದುವರೆಯಿತು. ನನ್ನ ಸಾಹಿತ್ಯದ ರಚನೆಗೆ ತಾಯಿಯೇ ಮೂಲ ಪ್ರೇರಣೆ’ ಎಂದು ಸ್ಮರಿಸಿಕೊಂಡರು.
‘ಶ್ರೀರಾಮನ ಚಾಲನಾ ಶಕ್ತಿಯೇ ಲಕ್ಷ್ಮಣ. ಅವನ ತ್ಯಾಗ, ಆದರ್ಶವನ್ನು ಕೇಂದ್ರವಾಗಿಟ್ಟುಕೊಂಡು ರಾಮಾಯಣ ಮಹಾನ್ವೇಷಣ ಕೃತಿ ಬರೆದೆ. ನಾನು ಜೀವನದಲ್ಲಿ ಸುಖಪಟ್ಟಿದ್ದು ಕಡಿಮೆ. ನನ್ನ ಎರಡೂ ಮಹಾಕಾವ್ಯಗಳನ್ನು ರಚನೆಗೆ ಬದುಕಿನ ಅನುಭವಗಳೇ ಕಾರಣ’ ಎಂದರು.
‘ಯಾವ ಮಹಾಕಾವ್ಯಗಳಲ್ಲಿಯೂ ಸ್ತ್ರೀ ಕೇಂದ್ರ ಬಿಂದುವಾಗಿರಲಿಲ್ಲ. ಮಹಾಭಾರತದಲ್ಲಿ ಕೃಷ್ಣನಿಗೆ ಸರಿಸಾಟಿಯಾದ ಪಾತ್ರ ದ್ರೌಪದಿ. ಕೃಷ್ಣನನ್ನು ವಿಮರ್ಶೆಗೆ ಒಳಪಡಿಸುವ ಶಕ್ತಿ ಇದ್ದದ್ದು ದ್ರೌಪದಿಗೆ ಮಾತ್ರ. ಹೀಗಾಗಿ ದ್ರೌಪದಿಯನ್ನು ಕೇಂದ್ರವಾಗಿಟ್ಟುಕೊಂಡು ಸಿರಿಮುಡಿ ಪರಿಕ್ರಮಣ ರಚನೆ ಮಾಡಲಾಗಿದೆ’ ಎಂದು ಹೇಳಿದರು.
ದ್ರೌಪದಿ ಕೇವಲ ಮಹಾಭಾರತಕ್ಕೆ ಸೀಮಿತವಲ್ಲ. ಆಕೆಯದು ಹೊಸ ಯುಗಕ್ಕೆ ಅಹಿಂಸೆ, ಶಾಂತಿ, ಸಮಾನತೆ ನೀಡುವ ದಾರ್ಶನಿಕ ವ್ಯಕ್ತಿತ್ವ. ಅದನ್ನೇ ಮುಂದುವರೆಸಿ ಸತ್ಯ, ಅಹಿಂಸೆ, ಸಮಾನತೆ ತತ್ವಗಳನ್ನು ಆಧರಿಸಿ ಮೂರನೇ ಮಹಾಕಾವ್ಯ ‘ಬಾಹುಬಲಿ’ ಬರೆಯುತ್ತಿದ್ದೇನೆ’ ಎಂದು ತಿಳಿಸಿದರು.
***
ನನ್ನ ರಾಜಕೀಯ, ಸಾಮಾಜಿಕ ಬದುಕಿನ ಯಶಸ್ಸಿಗೆ ಸಾಹಿತ್ಯ ಕಾರಣ. ಅದೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ.
-ವೀರಪ್ಪ ಮೊಯಿಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.