ADVERTISEMENT

‘ಹೊಸಪದಗಳು ಗ್ರಹಿಕೆಗೆ ನಿಲುಕಬೇಕು’

​ಪ್ರಜಾವಾಣಿ ವಾರ್ತೆ
Published 3 ಮೇ 2014, 20:13 IST
Last Updated 3 ಮೇ 2014, 20:13 IST
ಹೊನಲು ಬ್ಲಾಗ್ ಬಳಗವು ಶನಿವಾರ ಏರ್ಪಡಿಸಿದ್ದ ಬ್ಲಾಗ್‌ನ ಒಂದನೇ  ವಾರ್ಷಿ­ಕೋತ್ಸವ ಸಮಾರಂಭವನ್ನು ಇತಿಹಾಸ ತಜ್ಞ ಪ್ರೊ.ಷ.ಶೆಟ್ಟರ್ ಉದ್ಘಾಟಿಸಿ­ದರು. ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ, ಹೊನಲು ಬಳಗದ ಕಿರಣ್ ಬಾಟ್ನಿ ಮತ್ತು ‘ಪ್ರಜಾವಾಣಿ’ ಮುಖ್ಯ ಉಪ ಸಂಪಾದಕ ಎನ್‌.ಎ.ಎಂ. ಇಸ್ಮಾಯಿಲ್ ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ
ಹೊನಲು ಬ್ಲಾಗ್ ಬಳಗವು ಶನಿವಾರ ಏರ್ಪಡಿಸಿದ್ದ ಬ್ಲಾಗ್‌ನ ಒಂದನೇ ವಾರ್ಷಿ­ಕೋತ್ಸವ ಸಮಾರಂಭವನ್ನು ಇತಿಹಾಸ ತಜ್ಞ ಪ್ರೊ.ಷ.ಶೆಟ್ಟರ್ ಉದ್ಘಾಟಿಸಿ­ದರು. ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ, ಹೊನಲು ಬಳಗದ ಕಿರಣ್ ಬಾಟ್ನಿ ಮತ್ತು ‘ಪ್ರಜಾವಾಣಿ’ ಮುಖ್ಯ ಉಪ ಸಂಪಾದಕ ಎನ್‌.ಎ.ಎಂ. ಇಸ್ಮಾಯಿಲ್ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಡು ಮಾತಿನಲ್ಲಿ ಬಳಕೆ­ಯಲ್ಲಿ­ರುವ ಎಲ್ಲರ ಕನ್ನಡವನ್ನೂ ಬರವ­ಣಿ­ಗೆಗೆ ತರಬೇಕು; ಭಾಷಿಕ ಬದಲಾವಣೆ ಸಾಮಾನ್ಯರ ಉಚ್ಚಾರಣೆಗೆ ಮತ್ತು ಗ್ರಹಿಕೆಗೆ ನಿಲುಕುವಂತಿರಬೇಕು; ಈಗಾ­ಗಲೇ ರೂಢಿಯಲ್ಲಿರುವ ಪದಗಳನ್ನು ಬದಲಿಸುವ ಅಗತ್ಯವಾದರೂ ಏನು?.

ಹೊನಲು ಬ್ಲಾಗ್ ಬಳಗವು ಶನಿವಾರ ಏರ್ಪಡಿಸಿದ್ದ ಬ್ಲಾಗ್‌ನ ಮೊದಲ ವಾರ್ಷಿಕೋತ್ಸವ ‘ಹೊನಲು ಮಿಂಬಾ­ಗಿಲಿಗೆ ಮೊದಲನೇ ವರುಷದ ಹುಟ್ಟು­ಹಬ್ಬ’ದಲ್ಲಿ ಶಿಷ್ಟ ಭಾಷೆಯನ್ನು ಕೈ­ಬಿಡುವ ಬಗ್ಗೆ ನಡೆದ ಚರ್ಚೆಯಲ್ಲಿ ಕೇಳಿಬಂದ ಅಭಿಪ್ರಾಯಗಳಿವು.

ಹೊನಲು ಬಳಗದ ಕಿರಣ್ ಬಾಟ್ನಿ ಅವರು, ‘ಆಡುನುಡಿಯ ಕನ್ನಡದಲ್ಲಿ ಬಳಕೆ­ಯ­ಲ್ಲಿ­ಲ್ಲದ ಅಕ್ಷರಗಳು ಮತ್ತು ಪದ­ಗಳನ್ನು ಕೈಬಿಡಬೇಕು. ಹೊನಲು ಬಳಗವು ಇಂಗ್ಲಿಷ್ ಮತ್ತು ಸಂಸ್ಕೃತ ಮೂಲದ ಪದಗಳನ್ನು ಕನ್ನಡಕ್ಕೆ ಬದ­ಲಿಸುವ ಮತ್ತು ಹೊಸ ಕನ್ನಡ ಪದಗ­ಳನ್ನು ಸೃಷ್ಟಿಸುವ ಭಾಷಿಕ ಪ್ರಯೋಗಕ್ಕೆ ಮುಂದಾ­ಗಿದೆ. ಮಹಾಪ್ರಾಣಗಳನ್ನು  ಕೈಬಿಟ್ಟು, ಸಂಸ್ಕೃತ, ಇಂಗ್ಲಿಷ್ ಮೂಲದ ಪದಗಳ ಬದಲಿಗೆ ಕನ್ನಡ­ದಲ್ಲೇ ಹೊಸ ಪದಗಳನ್ನು ಸೃಷ್ಟಿಸ­ಲಾಗು­ತ್ತಿದೆ’ ಎಂದರು.

ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ ಮಾತ­ನಾಡಿ, ‘ತಾಂತ್ರಿಕ ವಿಚಾರ­ಗ­­ಳನ್ನು ಕನ್ನಡ­ದಲ್ಲಿ ನೀಡುವ ಪ್ರಯತ್ನ ಹಿಂದೆಯೇ ನಡೆದಿದೆ. 30 ವರ್ಷ­ಗಳ ಹಿಂದೆ ಎನ್‌ಜಿಇಎಫ್‌ ಕಾರ್ಖಾ­ನೆಯ ನೌಕ­ರ­ರಿಗೆ ಯಂತ್ರಗಳ ಕೈ­ಪಿಡಿ­­­ಗಳನ್ನು ಕನ್ನಡ­ದಲ್ಲಿ ನೀಡುವ ಪ್ರಯತ್ನ ನಡೆ­ದಿತ್ತು. ಹಲವು ಮಿತಿ­ಗ­­­­­ಳಿಂ­ದ ಇಂತಹ ಪ್ರಯತ್ನಗಳು ವಿಫಲ­ವಾ­ಗಿವೆ’ ಎಂದರು.

ಇತಿಹಾಸ ತಜ್ಞ ಪ್ರೊ.ಷ.ಶೆಟ್ಟರ್, ‘ಹೊಸದಾಗಿ ಸೃಷ್ಟಿಸಿದ ಪದಗಳನ್ನು ಉಚ್ಚ­ರಿಸುವಲ್ಲಿ ಮತ್ತು ಅರ್ಥ ಮಾಡಿ­ಕೊಳ್ಳು­ವಲ್ಲಿ ಜನಸಾಮಾನ್ಯರಿಗೆ ಕಿರಿಕಿರಿ ಉಂಟಾಗಬಾರದು’ ಎಂದರು. 

‘ಪ್ರಜಾವಾಣಿ’ ಮುಖ್ಯ ಉಪ ಸಂಪಾ­ದಕ ಎನ್‌.ಎ.ಎಂ.ಇಸ್ಮಾಯಿಲ್ ಮಾತ­­ನಾಡಿ, ‘ಹೊಸ ಪದಗಳನ್ನು ಭಾಷಾ ತಜ್ಞರೇ ಸೃಷ್ಟಿಸಬೇಕಿಲ್ಲ. ಆಯಾ ಕ್ಷೇತ್ರ­­ದಲ್ಲಿ ಪರಿಣಿತರಾದವರೇ ಹೊಸ ಪದ­­ಗ­ಳನ್ನು ಸೃಷ್ಟಿಸಬಹುದು. ಬದ­ಲಾ­ವ­ಣೆಯ ಹೆಸರಿ­ನಲ್ಲಿ ಈಗಾ­ಗಲೇ ಬಳಕೆ­­­ಯ­ಲ್ಲಿ­ರುವ ಪದಗಳನ್ನು ಕೈಬಿಡು­ವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.