ಬೆಂಗಳೂರು: ‘ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸು-ವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ತುಳುವರ ನಿಯೋಗವನ್ನು ದೆಹಲಿಗೆ ಕರೆದೊಯ್ಯುತ್ತೇನೆ’ ಎಂದು ಸಂಸದ ಅನಂತಕುಮಾರ್ ಭರವಸೆ ನೀಡಿದರು.
ತುಳುವೆರೆ ಚಾವಡಿಯು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಿಹಾರದ ಭೋಜ್ ಪುರಿ ಭಾಷೆಯನ್ನು ಸೇರ್ಪಡೆ ಮಾಡುವಂತೆ ಉತ್ತರ ಭಾರತದ ಸಂಸದರ ಒತ್ತಡ ಹೆಚ್ಚಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುವ ಮೊದಲು ಸಂಸದರನ್ನು ಒಳಗೊಂಡ ನಿಯೋಗವು ಕೇಂದ್ರಕ್ಕೆ ಭೇಟಿ ನೀಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘ ತುಳು ಭಾಷೆಯ ಆಧಾರದ ಮೇಲೆ ಕರಾವಳಿಯ ವಿಭಿನ್ನ ಸಂಸ್ಕತಿಯು ರೂಪುಗೊಂಡಿದೆ. ಕನ್ನಡ ಹಾಗೂ ತುಳು ನಡುವೆ ಒಂದು ಸಾಮರಸ್ಯವಿದ್ದು, ಈ ನೆಲದ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ತುಳು ಭಾಷೆಯ ಪಾತ್ರವೂ ಮಹತ್ವದ್ದಾಗಿದೆ’ ಎಂದರು.
‘ನನ್ನ ರಾಜಕೀಯ ಜೀವನ ಹಾಗೂ ಸಂಸ್ಕಾರದ ಮೇಲೆ ಕರಾವಳಿಯ ಜನತೆಯ ಋಣವಿದೆ. ಈ ಋಣ ತೀರಿಸುವ ಸಲುವಾಗಿಯೇ ತುಳು ಭಾಷೆಗೆ ಸಂವಿಧಾನದಲ್ಲಿ ಮಾನ್ಯತೆ ದೊರೆಯುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇನೆ’ ಎಂದು ತಿಳಿಸಿದರು.
‘ಬ್ಯಾಂಕ್, ಹೋಟೆಲ್, ಶಿಕ್ಷಣ ಸಂಸ್ಥೆ ಎಲ್ಲ ಕ್ಷೇತ್ರದಲ್ಲೂ ಕರಾವಳಿಯ ಜನತೆ ತಮ್ಮದೇ ಛಾಪು ಮೂಡಿಸಿದ್ದಾರೆ. ಎಲ್ಲೇ ನೆಲೆ ನಿಂತರೂ ಕರಾವಳಿ ಮಣ್ಣಿನ ಸಂಸ್ಕೃತಿ ಪಸರಿಸುತ್ತಾರೆ’ ಎಂದರು. ಸಾಹಿತಿ ಡಿ.ಕೆ.ಚೌಟರಿಗೆ ‘ತುಳುನಾಡ ಸಿರಿ’ ಪ್ರಶಸ್ತಿಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.