ADVERTISEMENT

‘ಪತ್ನಿ ಹೇಳಿದ್ದಕ್ಕೆ ಗುಂಡು ಹಾರಿಸಿ ಕೊಂದೆ’

ಜಯನಗರ ಪೊಲೀಸರಿಗೆ ಹೇಳಿಕೆ ಕೊಟ್ಟ ಉದ್ಯಮಿ ಗಣೇಶ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 20:12 IST
Last Updated 26 ಜೂನ್ 2018, 20:12 IST

ಬೆಂಗಳೂರು: ‘ಸಾಲದಿಂದ ನಮ್ಮ ಕುಟುಂಬದ ನೆಮ್ಮದಿ ಹಾಳಾಯಿತು. ಸಾಲಗಾರರ ಕಾಟದಿಂದ ಮರ್ಯಾದೆಯೇ ಇಲ್ಲವಾಯಿತು. ಅವಾಗಲೇ ನಾನು, ಪತ್ನಿ ಸಾಯುವ ನಿರ್ಧಾರ ಮಾಡಿದೆವು. ಪತ್ನಿ ಹೇಳಿದ್ದಕ್ಕೆ ಆಕೆಯ ಮೇಲೆ ಗುಂಡು ಹಾರಿಸಿ ಕೊಂದೆ’.

ಇದು. ಜಯನಗರದಲ್ಲಿ ಪತ್ನಿಯನ್ನು ಕೊಲೆ ಮಾಡಿ ಮಕ್ಕಳ ಮೇಲೂ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಬಂಧಿಸಲಾಗಿರುವ ಉದ್ಯಮಿ ಗಣೇಶ್‌, ಪೊಲೀಸರಿಗೆ ಕೊಟ್ಟ ಹೇಳಿಕೆ.

‘‌ಸ್ವಂತ ಊರಾದ ಸಕಲೇಶಪುರದಲ್ಲಿದ್ದ ಆಸ್ತಿಯನ್ನು ಮಾರಿ ಬೆಂಗಳೂರಿಗೆ ಬಂದೆ. ಇಲ್ಲಿ ಆರಂಭದಲ್ಲಿ ಸಂಪಾದನೆ ಉತ್ತಮವಾಗಿತ್ತು. ಕ್ರಮೇಣ ನಷ್ಟ ಉಂಟಾಗಲಾರಂಭಿಸಿತು. ರಿಯಲ್ ಎಸ್ಟೇಟ್‌, ರೆಸಾರ್ಟ್‌ ವ್ಯವಹಾರ ಸುಧಾರಿಸಬಹುದು ಎಂದುಕೊಂಡಿದ್ದೆ. ಆದರೆ, ಆ ದೇವರು ಕೈ ಹಿಡಿಯಲಿಲ್ಲ. ನಷ್ಟದ ಮೇಲೆ ನಷ್ಟ ಉಂಟಾಗಿ ತೊಂದರೆಗೆ ಸಿಲುಕಿದೆ’ ಎಂದು ಆತ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ADVERTISEMENT

‘ಸಾಲಗಾರರು ಮನೆಗೆ ಹಾಗೂ ರೆಸಾರ್ಟ್‌ಗೆ ಬರಲಾರಂಭಿಸಿದ್ದರು. ಅವರಿಗೆ ಮುಖ ತೋರಿಸಲಾಗದ ಸ್ಥಿತಿಗೆ ಬಂದು ನಿಂತೆ. ಸಾಲ ತೀರಿಸುವಷ್ಟು ಹಣವಿಲ್ಲವೆಂದು ಪತ್ನಿಗೆ ಹೇಳಿದ್ದೆ. ಆಗ ನನಗೆ ಸಮಾಧಾನ ಹೇಳಿದ್ದ ಆಕೆ, ‘ಒಟ್ಟಿಗೆ ಎಲ್ಲರೂ ಸಾಯೋಣ. ಈ ಸಾಲಗಾರರ ಕಾಟವೂ ಇರುವುದಿಲ್ಲ’ ಎಂದಿದ್ದಳು. ಅವಾಗಲೇ ಆಕೆಯ ಮೇಲೆ ಗುಂಡು ಹಾರಿಸಿದೆ’ ಎಂದು ಹೇಳಿದ್ದಾನೆ.

‘ಪತ್ನಿಯನ್ನು ಕೊಂದ ನಂತರ, ಮಕ್ಕಳನ್ನು ಕೊಂದು ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೆ. ಮಕ್ಕಳು ಓದುತ್ತಿದ್ದ ಶಾಲೆಗೆ ಹೋಗಿ, ‘ಅಮ್ಮ ಕರೆಯುತ್ತಿದ್ದಾರೆ. ಬನ್ನಿ...’ ಎಂದಿದ್ದೆ. ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ತೋಟದ ಮನೆಗೆ ಕರೆದೊಯ್ದಿದ್ದೆ. ಶುಕ್ರವಾರ(ಜೂನ್ 22) ಬೆಳಿಗ್ಗೆ ಮಕ್ಕಳ ಮೇಲೂ ಗುಂಡು ಹಾರಿಸಿದೆ. ‘ಅಪ್ಪ. ನಮಗೆ ಗುಂಡು ಏಕೆ ಹೊಡೆದ್ರಿ’ ಎಂದು ಮಕ್ಕಳು ಅಳಲಾರಂಭಿಸಿದರು. ಅವರ ಸಂಕಟ ನೋಡಿ ನೋವಾಯಿತು. ಅವರನ್ನು ಬದುಕಿಸಿಕೊಳ್ಳಬೇಕೆಂದು ತೀರ್ಮಾನಿಸಿ, ಕಾರಿನಲ್ಲಿ ಹತ್ತಿಸಿಕೊಂಡು ಆಸ್ಪತ್ರೆಯತ್ತ ಹೊರಟಿದ್ದೆ. ಅವಾಗಲೇ ಪೊಲೀಸರು ನನ್ನನ್ನು ಬಂಧಿಸಿದರು’ ಎಂದು ಗಣೇಶ್‌ ಹೇಳಿರುವುದಾಗಿ ಹಿರಿಯ ಅಧಿಕಾರಿ ವಿವರಿಸಿದರು.

ಆರೋಪಿ ನ್ಯಾಯಾಂಗ ಬಂಧನಕ್ಕೆ

ಕೊಲೆ ಹಾಗೂ ಕೊಲೆ ಯತ್ನ ಆರೋಪದಡಿ ಬಂಧಿಸಲಾಗಿರುವ ಗಣೇಶ್‌ನನ್ನು ಪೊಲೀಸರು, ನ್ಯಾಯಾಲಯದ ಎದುರು ಮಂಗಳವಾರ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.