ಬೆಂಗಳೂರು: ‘ಕೋಲಾರ ಜಿಲ್ಲೆಯ ಕೆರೆಗಳಿಗೆ ಸಂಸ್ಕರಿಸಿದ ನೀರು ಹರಿಸುವ ಕೆ.ಸಿ (ಕೋಲಾರ-ಚಲ್ಲಘಟ್ಟ) ವ್ಯಾಲಿ ಯೋಜನೆಯ ಸಮಗ್ರ ಮೌಲ್ಯಮಾಪನ ನಡೆಸಲು ಸ್ವತಂತ್ರ ತಜ್ಞ ಸಂಸ್ಥೆಯೊಂದನ್ನು ನೇಮಕ ಮಾಡುವ ಕುರಿತಂತೆ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಚಿಕ್ಕಬಳ್ಳಾಪುರ ತಾಲ್ಲೂಕಿನ ಪಟ್ರೇನಹಳ್ಳಿಯ ಆರ್. ಆಂಜನೇಯ ರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ‘ಯೋಜನೆಯಿಂದ ಅಂತರ್ಜಲದ ಮೇಲಾಗುವ ಪರಿಣಾಮಗಳ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯಂತಹ (ಐಐಎಸ್‌ಸಿ) ತಜ್ಞ ಸಂಸ್ಥೆಯಿಂದ ಸಮಗ್ರ ಮೌಲ್ಯಮಾಪನ ನಡೆಸುವುದು ಉಚಿತಲ್ಲವೆ’ ಎಂದು ಕೇಳಿತು.
ಇದಕ್ಕೆ ಸರ್ಕಾರದ ಪರ ವಕೀಲರು, ‘ಈ ಸಂಬಂಧ ಸರ್ಕಾರದ ಜೊತೆ ಚರ್ಚಿಸಿ ಮಾಹಿತಿ ನೀಡಲಾಗುವುದು. ಅದಕ್ಕಾಗಿ ಎರಡು ವಾರಗಳ ಸಮಯಾವಕಾಶ ಬೇಕು’ ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.