ADVERTISEMENT

₹ 100 ಕೋಟಿ ವಂಚನೆ?

ಟಿಡಿಆರ್‌: ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕ್‌ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 16 ಮೇ 2019, 20:20 IST
Last Updated 16 ಮೇ 2019, 20:20 IST
ಬ್ಯಾಂಕ್‌ ದಾಖಲೆ ಪರಿಶೀಲಿಸುತ್ತಿರುವ ಎಸಿಬಿ ಅಧಿಕಾರಿಗಳು
ಬ್ಯಾಂಕ್‌ ದಾಖಲೆ ಪರಿಶೀಲಿಸುತ್ತಿರುವ ಎಸಿಬಿ ಅಧಿಕಾರಿಗಳು   

ಬೆಂಗಳೂರು: ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಕಟ್ಟಡ ಮತ್ತು ನಿವೇಶನಕ್ಕೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ವಂಚನೆ ಕುರಿತು ತನಿಖೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು ಕಬ್ಬನ್‌ ಪೇಟೆಯಲ್ಲಿರುವ ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕ್‌ ಮೇಲೆ ಗುರುವಾರ ದಾಳಿ ನಡೆಸಿ ₹ 100 ಕೋಟಿ ವಹಿವಾಟಿಗೆ ಸಂಬಂಧಿಸಿದ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ

ಬೆಳಿಗ್ಗೆಯಿಂದಲೇ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳ ತಂಡ ಸುಮಾರು 60 ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ. ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಕಟ್ಟಡ, ನಿವೇಶನಕ್ಕಿಂತಲೂ ಅಧಿಕ ಜಾಗಕ್ಕೆ ಅಭಿವೃದ್ಧಿ ಹಕ್ಕು ಪತ್ರ (ಡಿಆರ್‌ಸಿ) ಅಥವಾ ಪರಿಹಾರ ನೀಡುವ ಮೂಲಕ ಸರ್ಕಾರಕ್ಕೆ ನೂರಾರು ಕೋಟಿ ವಂಚಿಸಿರುವ ಪ್ರಕರಣಗಳನ್ನು ಎಸಿಬಿ ಬಯಲಿಗೆ ಎಳೆದಿದೆ.

ಈ ವಂಚನೆ ಹಗರಣದಲ್ಲಿ ಕೆಲವು ಬಿಡಿಎ, ಬಿಬಿಎಂಪಿ ಅಧಿಕಾರಿಗಳು, ಮಧ್ಯವರ್ತಿಗಳು ಭಾಗಿಯಾಗಿದ್ದು, ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ₹ 100 ಕೋಟಿಗೂ ಅಧಿಕ ಹಣ ವಿತರಿಸಲಾಗಿದೆ. ನಿಗದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಡೆದ ಪರಿಹಾರದಲ್ಲಿ ಇವರೆಲ್ಲರೂ ಲಾಭ ಪಡೆದಿದ್ದಾರೆ. ಬ್ಯಾಂಕಿನ ಅಧಿಕಾರಿಗಳೂ ಪಾಲು ಪಡೆದಿರುವ ಶಂಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗೆ ಬ್ಯಾಂಕ್‌ ಅಧಿಕಾರಿಗಳು ಸಿಗಲಿಲ್ಲ.

ADVERTISEMENT

ಕಟ್ಟಡ, ಜಮೀನು ಕಳೆದುಕೊಂಡ ಮಾಲೀಕರ ಪರವಾಗಿ ಮಧ್ಯವರ್ತಿಗಳು ಪರಿಹಾರದ ಚೆಕ್‌ ಪಡೆದುಕೊಂಡು ಮಹಿಳಾ ಬ್ಯಾಂಕಿಗೆ ಹಾಕಿ ತಕ್ಷಣ ಹಣ ಪಡೆಯುತ್ತಿದ್ದರು. ಈ ಕುರಿತು ಮಾಹಿತಿ ನೀಡುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಪತ್ರ ಬರೆದಿದ್ದರು. ಅವರಿಂದ ಸ್ಪಂದನೆ ಸಿಗದಿದ್ದರಿಂದ ದಾಳಿ ನಡೆಸಲಾಗಿದೆ. ಈ ವ್ಯವಹಾರದಲ್ಲಿ ವ್ಯಕ್ತಿಯೊಬ್ಬರು ಪ್ರಮುಖ ಪಾತ್ರ ವಹಿಸಿದ್ದು, ಅವರನ್ನು ವಿಚಾರಣೆಗೆ ಒಳಪಡಿಸುವುದಾಗಿ ಅಧಿಕಾರಿ ವಿವರಿಸಿದರು.

ನಗರದ ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆಗೆ ವಶಪಡಿಸಿಕೊಂಡ ಜಮೀನೊಂದರ ಟಿಡಿಆರ್‌ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು ಭಾರಿ ವಂಚನೆ ಪತ್ತೆ ಹಚ್ಚಿದ್ದರು. ಬಳಿಕ ಹಗರಣದ ಬೇರಿಗೆ ಕೈಹಾಕಿದ ತನಿಖಾ ತಂಡಕ್ಕೆ ಪರಿಹಾರ ನೀಡಿಕೆಯಲ್ಲೂ ವಂಚನೆ ಆಗಿರುವುದು ಕಂಡು ಬಂತು. ಮಧ್ಯವರ್ತಿಗಳು ಹಣಕಾಸು ವಹಿವಾಟಿಗೆ ಮಹಿಳಾ ಸಹಕಾರಿ ಬ್ಯಾಂಕ್‌ ಅವಲಂಬಿಸಿದ್ದು ಸಂಶಯಕ್ಕೆ ಎಡೆ ಮಾಡಿತ್ತು. ಈ ಕಾರಣಕ್ಕೆ ದಾಳಿ ನಡೆಸಲಾಯಿತು ಎಂದೂ ಅವರು ಸ್ಪಷ್ಟಪಡಿಸಿದರು.

ಬಿಡಿಎ ಎಇಇ ಕೃಷ್ಣಲಾಲ್‌ ಮತ್ತು ಅವರ ಆಪ್ತರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ಈಚೆಗೆ ದಾಳಿ ನಡೆಸಿದ ಬಳಿಕ ಟಿಡಿಆರ್‌ ವಂಚನೆ ಬಹಿರಂಗಕ್ಕೆ ಬಂದಿತ್ತು. ತನಿಖೆ ಮುಂದುವರಿದಿದ್ದು, ಸರ್ಕಾರದ ಇನ್ನಷ್ಟು ಅಧಿಕಾರಿಗಳು ಎಸಿಬಿ ಬಲೆಗೆ ಬೀಳುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.