ADVERTISEMENT

ಪೀಣ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ₹100 ಕೋಟಿ: ಸಚಿವ ಎಂ.ಟಿ.ಬಿ. ನಾಗರಾಜು

‘ಉದ್ಯಮಿಯಾಗು– ಉದ್ಯೋಗ ನೀಡು’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 20:43 IST
Last Updated 11 ಅಕ್ಟೋಬರ್ 2021, 20:43 IST
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು - -–ಪ್ರಜಾವಾಣಿ ಚಿತ್ರ
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು - -–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪೀಣ್ಯ ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ₹100 ಕೋಟಿ ಮೀಸಲಿಡಲಾಗಿದೆ’ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆಗಳ ಸಚಿವಎಂ.ಟಿ.ಬಿ. ನಾಗರಾಜು ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ‘ಉದ್ಯಮಿಯಾಗು– ಉದ್ಯೋಗ ನೀಡು’ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗಾಗಿ ಪ್ರಸಕ್ತ ವರ್ಷ ಚೆನ್ನೈ– ಬೆಂಗಳೂರು ಮತ್ತು ಬೆಂಗಳೂರು–ಮುಂಬೈಕಾರಿಡಾರ್‌ಗಳಲ್ಲಿ ಸರ್ಕಾರ ಮತ್ತು ಖಾಸಗಿ ಕ್ಷೇತ್ರದ ಸಹಭಾಗಿತ್ವದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.

‘ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ₹4 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದ್ದು, ಕೈಗಾರಿಕೆ ಬೆಳವಣಿಗೆಯಲ್ಲಿ ದೇಶದಲ್ಲಿಯೇ ಕರ್ನಾಟಕ ಐದನೇ ಸ್ಥಾನದಲ್ಲಿದೆ. ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಎಂಎಸ್‌ಎಂಇ ಉದ್ದಿಮೆಗಳ ಪಾತ್ರ ಬಹಳ ಪ್ರಮುಖವಾಗಿದೆ. ದೇಶದಒಟ್ಟು ಆಂತರಿಕ ಉತ್ಪಾದನೆಗೆ (ಜಿಡಿಪಿ) ಎಂಎಸ್‌ಎಂಇ ವಲಯದ ಕೊಡುಗೆ ಶೇಕಡ 40ರಷ್ಟು ಇದೆ’ ಎಂದು ವಿವರಿಸಿದರು.

ADVERTISEMENT

‘ರಾಜ್ಯ ಸರ್ಕಾರವು ಹೊಸ ಪೀಳಿಗೆಯ ಉದ್ಯಮಶೀಲರಿಗೆ ಅಗತ್ಯ ನೆರವು ನೀಡಲು ಯೋಜನೆಗಳನ್ನು ರೂಪಿಸಲಾಗಿದೆ. ರಾಜ್ಯದಲ್ಲಿ ಕೈಗಾರಿಕೆ ಕ್ಲಸ್ಟರ್‌ಗಳ ಸ್ಥಾಪನೆಗೆ ಅವಕಾಶವಿದೆ. ಅಗತ್ಯ ಅನುದಾನ ನೀಡಿ ಈಗಾಗಲೇ11 ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗಿದೆ. ಇನ್ನೂ ಏಳು ಕೈಗಾರಿಕಾ ಕ್ಲಸ್ಟರ್‌ಗಳು ಸ್ಥಾಪನೆಯ ಹಂತದಲ್ಲಿವೆ’ ಎಂದು ನಾಗರಾಜು ಅವರು ತಿಳಿಸಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಅನಿಸಿಕೆಗಳು

‘ಕಾರ್ಯಾಗಾರದಲ್ಲಿ ಉದ್ಯಮಗಳ ಬಗ್ಗೆ ಮಾಹಿತಿ ತಿಳಿಯಿತು. ನವೋದ್ಯಮಗಳಲ್ಲಿನ ಅವಕಾಶಗಳು ಮತ್ತು ಯಾವ ರೀತಿ ಆರಂಭಿಸಬೇಕು ಎನ್ನುವ ಮಾಹಿತಿ ಲಭ್ಯವಾಯಿತು. ಜತೆಗೆ, ಸರ್ಕಾರದ ನೀತಿಗಳು ಮತ್ತು ಸೌಲಭ್ಯಗಳನ್ನು ಯಾವ ರೀತಿ ಪಡೆದುಕೊಳ್ಳಬೇಕು ಎನ್ನುವ ಪ್ರಾಥಮಿಕ ವಿವರಗಳು ಸಹ ದೊರೆತವು.

- ಹಿತೇಶ್‌ ಕುಮಾರ್‌, ಕೆಎಲ್‌ಇ ಕಾಲೇಜು ವಿದ್ಯಾರ್ಥಿ, ನಾಗರಬಾವಿ

–––

ಉದ್ಯಮಿಯಾಗಬೇಕು ಎನ್ನುವ ಹಂಬಲ ಇದೆ. ಈ ನಿಟ್ಟಿನಲ್ಲಿ ನನಗೆ ಕಾರ್ಯಾಗಾರ ಸ್ಫೂರ್ತಿಯಾಯಿತು. ಉದ್ಯಮಿಯಾಗಲು ವ್ಯಕ್ತಿತ್ವವನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು. ಯಾವ ರೀತಿ ಹೆಜ್ಜೆ ಇರಿಸಬೇಕು ಎನ್ನುವ ಬಗ್ಗೆ ಕೆಲವು ಮೂಲ ಅಂಶಗಳ ಬಗ್ಗೆ ತಿಳಿಯಿತು. ಇದರಿಂದ, ಇನ್ನಷ್ಟು ಮಾಹಿತಿ ತಿಳಿದುಕೊಳ್ಳುವ ಕುತೂಹಲ ಮೂಡಿತು. ಜತೆಗೆ, ಸರ್ಕಾರದ ನೀತಿಗಳು ಯಾವ ರೀತಿ ಇರುತ್ತವೆ ಹಾಗೂ ಕೌಶಲಗಳನ್ನು ಯಾವ ರೀತಿ ಬೆಳೆಸಿಕೊಳ್ಳಬೇಕು ಎನ್ನುವ ಮಾಹಿತಿ ಲಭ್ಯವಾಯಿತು.

–ಸೃಜನಾ, ವಿದ್ಯಾರ್ಥಿನಿ, ಬಿಐಎಂಎಸ್‌ ಕಾಲೇಜು

––––––––––––––

ಉದ್ಯೋಗಗಳನ್ನು ಹುಡುಕಿಕೊಂಡು ಹೋಗುವ ಬದಲು ನಾವೇ ಉದ್ಯಮಿಗಳಾಗಬಹುದು ಎನ್ನುವುದು ತಿಳಿಯಿತು. ಹಣಕಾಸಿನ ವಿಷಯಗಳನ್ನು ಯಾವ ರೀತಿ ನಿರ್ವಹಿಸಬಹುದು ಹಾಗೂ ಸರ್ಕಾರದ ಯೋಜನೆಗಳನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬಹುದು ಎನ್ನುವುದು ತಿಳಿಯಿತು. ಸಮಗ್ರವಾಗಿ ವಿಷಯಗಳು ಲಭ್ಯವಾಗದಿದ್ದರೂ ಭವಿಷ್ಯದಲ್ಲಿ ಉದ್ಯಮಿಗಳಾಗ ಬಯಸುವವರಿಗೆ ಒಂದು ಹೊಸ ದೃಷ್ಟಿಕೋನ ದೊರೆಯಿತು.

– ಮಂಜುನಾಥ್‌, ವಿದ್ಯಾರ್ಥಿ ಬಿಐಎಂಎಸ್‌ ಕಾಲೇಜು
–––––––––
ಕಾರ್ಯಾಗಾರಕ್ಕೆ ಉದ್ಯಮಗಳ ಬಗ್ಗೆ ಹೆಚ್ಚು ಆಸಕ್ತಿ ಇರುವವರನ್ನು ಮಾತ್ರ ಕರೆಯಿಸಬೇಕಾಗಿತ್ತು. ಉದ್ಯಮಗಳ ಸ್ಥಾಪನೆ ಮತ್ತು ಯೋಜನೆಗಳ ಬಗ್ಗೆ ಇನ್ನೂ ಹೆಚ್ಚಿನ ಸಮಯ ನೀಡಬೇಕಾಗಿತ್ತು. ತರಬೇತಿ ರೀತಿಯಲ್ಲಿ ಇದ್ದರೆ ಉತ್ತಮವಾಗುತ್ತಿತ್ತು. ಆದರೂ, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಲಭ್ಯವಾಯಿತು. ಜತೆಗೆ, ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಾವ ರೀತಿ ಉದ್ಯಮಗಳನ್ನು ಸ್ಥಾಪಿಸಬಹುದು ಎನ್ನುವ ಬಗ್ಗೆ ತಿಳಿಯಿತು.

- ಕಿಶೋರ್‌ ಕುಮಾರ್‌, ಸಿಬಿಐಟಿ ಎಂಜಿನಿಯರಿಂಗ್‌ ಕಾಲೇಜು, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.