ಬೆಂಗಳೂರು: ‘108 ಆರೋಗ್ಯ ಕವಚ’ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಆಂಬುಲೆನ್ಸ್ ಸಿಬ್ಬಂದಿ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸೋಮವಾರ ರಾತ್ರಿಯಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಮಂಗಳವಾರದವರೆಗೆ ಮುಂದೂಡಿದ್ದಾರೆ.
ಬಾಕಿ ವೇತನ ಪಾವತಿಗೆ ಸೋಮವಾರ ರಾತ್ರಿಯವರೆಗೆ ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿ ಗಡುವು ನೀಡಿದ್ದರು. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಕಾರಣದಿಂದ ತಾವು ನಿರ್ಧಾರ ಕೈಗೊಳ್ಳಲು ಅವಕಾಶವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಯ ಸಂಘಟನೆಗಳ ಪ್ರಮುಖರಿಗೆ ತಿಳಿಸಿದ್ದರು.
‘ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರು ಚುನಾವಣಾ ಕಾರ್ಯದಿಂದಾಗಿ ಹೊರ ರಾಜ್ಯದಲ್ಲಿದ್ದಾರೆ. ಮಂಗಳವಾರ ಇಬ್ಬರೂ ಬೆಂಗಳೂರಿಗೆ ಮರಳಲಿದ್ದು, ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಈ ಕಾರಣದಿಂದ ಮುಷ್ಕರ ಆರಂಭಿಸುವುದನ್ನು ಮಂಗಳವಾರ ಸಂಜೆಯವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ’ ಎಂದು ‘108 ಆರೋಗ್ಯ ಕವಚ’ ನೌಕರರನ್ನು ಪ್ರತಿನಿಧಿಸುವ ಸುವರ್ಣ ಕರ್ನಾಟಕ, ಅಖಲ ಕರ್ನಾಟಕ ಮತ್ತು ಆರೋಗ್ಯ ಕವಚ ನೌಕರರ ಸಂಘಟನೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.