ಬೆಂಗಳೂರು: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ ಪತ್ತೆ ಕಾರ್ಯ ಚುರುಕುಗೊಳಿಸಿರುವ ಆರೋಗ್ಯ ಇಲಾಖೆ, ರಾಜ್ಯದ ವಿವಿಧೆಡೆ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 1,093 ಕ್ಲಿನಿಕ್‌ಗಳಿಗೆ ಬೀಗ ಹಾಕಿಸಿದೆ.
ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ರಾಜ್ಯದ ವಿವಿಧೆಡೆ ಕಳೆದ ವರ್ಷ ವರದಿಯಾಗಿದ್ದವು. ಪರವಾನಗಿ ಇಲ್ಲದೆ, ನೋಂದಣಿ ಮಾಡದೆ ಹಾಗೂ ಅರ್ಹ ವಿದ್ಯಾರ್ಹತೆ ಇಲ್ಲದೆ ಕ್ಲಿನಿಕ್‌ಗಳನ್ನು ನಡೆಸುತ್ತಿರುವ ಬಗ್ಗೆಯೂ ಇಲಾಖೆಗೆ ದೂರುಗಳು ಸಲ್ಲಿಕೆಯಾಗಿದ್ದವು. ಇದರಿಂದಾಗಿ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಅನಧಿಕೃತ ಚಿಕಿತ್ಸಾ ಕೇಂದ್ರಗಳ ಮೇಲೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಇಲಾಖೆ ಸೂಚಿಸಿತ್ತು. ಕಳೆದ ವರ್ಷಾಂತ್ಯಕ್ಕೆ ನಕಲಿ ಕ್ಲಿನಿಕ್‌ಗಳ ಪತ್ತೆ ಕಾರ್ಯಕ್ಕೆ ವೇಗ ನೀಡಲಾಗಿದ್ದು, ಒಟ್ಟು 1,775 ನಕಲಿ ವೈದ್ಯರನ್ನು ಪತ್ತೆ ಮಾಡಲಾಗಿದೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೆಪಿಎಂಇ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿಯಾಗಬೇಕು. ಆದರೆ, ಕೆಲವರು ನೋಂದಣಿ ಮಾಡಿಕೊಳ್ಳದೆಯೇ ಚಿಕಿತ್ಸೆ ಒದಗಿಸುತ್ತಿದ್ದಾರೆ. ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ ಇಲ್ಲದವರೂ ಅನಧಿಕೃತವಾಗಿ ಕ್ಲಿನಿಕ್ ಮತ್ತು ಪ್ರಯೋಗಾಲಯಗಳನ್ನು ನಡೆಸುತ್ತಿದ್ದಾರೆ. ಅಂತಹ ಕ್ಲಿನಿಕ್ ಹಾಗೂ ಪ್ರಯೋಗಾಲಯಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಈ ಪರಿಶೀಲನೆ ವೇಳೆ ಗುರುತಿಸಲಾದ ಕ್ಲಿನಿಕ್‌ಗಳಲ್ಲಿ ಹೆಚ್ಚಿನವು ಪರವಾನಗಿ ಹೊಂದಿರದಿರುವುದು ದಾಳಿ ವೇಳೆ ತಿಳಿದುಬಂದಿದೆ.
ಉ.ಕ. ಭಾಗದಲ್ಲಿ ಅಧಿಕ: ಪತ್ತೆಯಾಗಿರುವ ನಕಲಿ ಕ್ಲಿನಿಕ್‌ಗಳಲ್ಲಿ ಹೆಚ್ಚಿನವು ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್‌ಗಳಾಗಿವೆ. ಪತ್ತೆ ಮಾಡಲಾದ ನಕಲಿ ಕ್ಲಿನಿಕ್‌ಗಳಲ್ಲಿ 54 ಕ್ಲಿನಿಕ್‌ಗಳನ್ನು ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. 24 ನಕಲಿ ಕ್ಲಿನಿಕ್‌ಗಳ ವೈದ್ಯರಿಗೆ ದಂಡ ವಿಧಿಸಲಾಗಿದೆ. ನಕಲಿ ಕ್ಲಿನಿಕ್‌ಗೆ ಸಂಬಂಧಿಸಿದಂತೆ 143 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ.
‘ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ ಇಲ್ಲದವರೂ ಅನಧಿಕೃತವಾಗಿ ಕ್ಲಿನಿಕ್ ಮತ್ತು ಪ್ರಯೋಗಾಲಯಗಳನ್ನು ನಡೆಸುತ್ತಿದ್ದಾರೆ. ಕೆಲವರು ಪರವಾನಗಿ ಪಡೆಯದೆ ಕ್ಲಿನಿಕ್ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ನಕಲಿ ಕ್ಲಿನಿಕ್ ಮತ್ತು ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹವರ ವಿರುದ್ಧ ಕಾನೂನಿನ ಅಡಿಯೂ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.