ಬೆಂಗಳೂರು: ಬಿಜೆಪಿಯ ‘ಆಪರೇಷನ್ ಕಮಲ’ಕ್ಕೆ ಒಳಗಾಗಿ ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ತಮ್ಮದೇ ಪಾತ್ರ ನಿರ್ವಹಿಸಿದ್ದ ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಈಗ ₹12.75 ಕೋಟಿ ಬೆಲೆಯ ದುಬಾರಿ ಕಾರು ಒಡೆಯ!
ವಿಶ್ವದ ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರನ್ನು ಕಳೆದ ಒಂದು ವಾರದ ಹಿಂದೆ ಖರೀದಿಸಿದ್ದಾರೆ. ಇದೇ ಕಾರಿನಲ್ಲಿ ಬುಧವಾರ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ಗೆ ಬಂದರು.
ಮುಖ್ಯಮಂತ್ರಿ ಮನೆಯ ಗೇಟಿನ ಒಳಗೆ ಕಾರು ಬರುತ್ತಿದ್ದಂತೆ ಎಲ್ಲರ ಚಿತ್ತ ಅತ್ತ ನೆಟ್ಟಿತ್ತು. ಆವರಣದಲ್ಲಿ ಇದ್ದವರು, ಮಾಧ್ಯಮದವರು ಸುತ್ತುವರಿದರು. ಕಾರಿನ ಮುಂದೆ ನಿಂತು ಹಲವರು ಸೆಲ್ಫಿ ತೆಗೆದುಕೊಂಡರೆ, ಮತ್ತೆ ಕೆಲವರು ವಿಡಿಯೊ ಮಾಡಿಕೊಂಡರು, ಕೆಲವರು ಮುಟ್ಟಿ ನೋಡಿ, ಬೆಲೆ ಕೇಳಿ ‘ಅಬ್ಬಾ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
‘ತೆರಿಗೆ ಸೇರಿ ₹12.75 ಕೋಟಿ ಕೊಟ್ಟು ಕಾರು ಖರೀದಿಸಿದ್ದೇನೆ. ಹಿಂದಿನಿಂದಲೂ ರೋಲ್ಸ್ ರಾಯ್ಸ್ ಕಾರಿನಲ್ಲಿ ಓಡಾಡಬೇಕು ಎಂಬ ಕನಸಿತ್ತು. ಈಗ ಅದು ಈಡೇರಿದೆ’ ಎಂದು ನಾಗರಾಜ್ ನಸುನಕ್ಕರು.
‘ಮಳೆ, ನೆರೆಯಿಂದ ಸಂತ್ರಸ್ತರಾದವರಿಗೆ ನೆರವು ನೀಡುವ ಸಲುವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂ.ಟಿ.ಬಿ ಸಂಸ್ಥೆಯಿಂದ ₹1 ಕೋಟಿ ನೀಡುವುದಾಗಿ ಹೇಳಿದ್ದೆ. ಈಗಚೆಕ್ ಕೊಟ್ಟಿದ್ದೇನೆ’ ಎಂದು ಅವರು ತಿಳಿಸಿದರು.
ಜಾಲತಾಣದಲ್ಲಿ ಟೀಕೆ: ಈ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ‘ಆಪರೇಷನ್ ಕಮಲ’ಕ್ಕೆ ಒಳಗಾಗಿ ದುಬಾರಿ ಕಾರು ಕೊಂಡುಕೊಂಡಿದ್ದಾರೆ ಎಂದು ಕೆಲ ನೆಟ್ಟಿಗರು ಟೀಕಿಸಿದ್ದಾರೆ.
ಯಾರೂ ತಮ್ಮ ಮನೆಯಿಂದ ಇಷ್ಟೊಂದು ಹಣ ಹಾಕಿ ಕೊಳ್ಳುವುದಿಲ್ಲ. ನೂರಾರು ಕೋಟಿಗಳ ಒಡೆಯರಾಗಿದ್ದರೂ ಇಂಥ ದುಬಾರಿ ಕಾರು ಖರೀದಿಸಲು ಹಿಂದೆ ಮುಂದೆ ನೋಡುತ್ತಾರೆ. ಅಂತಹುದರಲ್ಲಿ ಇವರು ಜೇಬಿನಿಂದ ಹಣ ಕೊಟ್ಟು ಕೊಂಡುಕೊಂಡಿದ್ದಾರೆಯೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಚರ್ಚೆ ನಡೆಸಿದ್ದಾರೆ.
ಕಾರಿನ ಬೆಲೆ
ರೋಲ್ಸ್ ರಾಯ್ಸ್ ಕಾರಿನ ಎಕ್ಸ್ ಶೋ ರೂಂ ಬೆಲೆ ₹6.95 ಕೋಟಿ ಇದ್ದು, ದುಬೈನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಐಷಾರಾಮಿ ಕಾರು ತೆರಿಗೆ, ಸುಂಕ ಸೇರಿದರೆ ₹10 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ.
‘ಕಾರು ಆಮದು ಮಾಡಿಕೊಂಡಿದ್ದು, ತೆರಿಗೆ, ಖರ್ಚು ವೆಚ್ಚ ಸೇರಿದರೆ ₹12.75 ಕೋಟಿ ಆಗುತ್ತದೆ’ ಎಂದು ನಾಗರಾಜ್
ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.