ADVERTISEMENT

ಆ.30ರಿಂದ ಸೆ.1ರವರೆಗೆ ವರ್ಜೀನಿಯಾದಲ್ಲಿ 12ನೇ ವಿಶ್ವ ಕನ್ನಡ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 15:37 IST
Last Updated 29 ಫೆಬ್ರುವರಿ 2024, 15:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಅಮೆರಿಕ ಕನ್ನಡ ಕೂಟಗಳ ಒಕ್ಕೂಟವು (ಅಕ್ಕ) ಮುಂಬರುವ ಆ.30ರಿಂದ ಸೆ.1ರವರೆಗೆ ಅಮೆರಿಕದ ವರ್ಜೀನಿಯಾದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ 12ನೇ ವಿಶ್ವ ಕನ್ನಡ ಸಮ್ಮೇಳನ ಹಮ್ಮಿಕೊಂಡಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ಅಕ್ಕ’ ಅಧ್ಯಕ್ಷ ರವಿ ಬೋರೇಗೌಡ, ‘ವಾಷಿಂಗ್ಟನ್‌ ಡಿ.ಸಿ. ಕಾವೇರಿ ಕನ್ನಡ ಸಂಘ, ರಿಚ್ಮಂಡ್‌ ಕನ್ನಡ ಸಂಘದ ಆಶ್ರಯದಲ್ಲಿ ಈ ಸಮ್ಮೇಳನ ನಡೆಯಲಿದೆ. ಇದು ಕರ್ನಾಟಕದ ಹೊರಗಡೆ ನಡೆಯುತ್ತಿರುವ ಅತಿ ದೊಡ್ಡ ಉತ್ಸವವಾಗಿದೆ. ಎರಡು ವರ್ಷಗಳಿಗೆ ಒಮ್ಮೆ ಈ ಉತ್ಸವವನ್ನು ನಡೆಸಲಾಗುತ್ತಿದ್ದು, ಈ ಬಾರಿ ಅದ್ದೂರಿಯಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿದ್ದು, ಏಳು ಸಾವಿರ ಕನ್ನಡಿಗರು ಸೇರುವ ನಿರೀಕ್ಷೆಯಿದೆ’ ಎಂದು ಹೇಳಿದರು. 

ADVERTISEMENT

‘ಈ ಸಮ್ಮೇಳನಕ್ಕೆ ಕರ್ನಾಟಕ ಮತ್ತು ಅಮೆರಿಕದ ಎಲ್ಲ ರಾಜ್ಯಗಳಿಂದ ಗಣ್ಯ ವ್ಯಕ್ತಿಗಳು ಬರುವ ನಿರೀಕ್ಷೆಯಿದೆ. ಪ್ರತಿನಿತ್ಯ ಮನೋರಂಜನಾ ಕಾರ್ಯಕ್ರಮದ ಜತೆಗೆ ವಿವಿಧ ಬಗೆಯ ತಿನಿಸುಗಳು ಲಭ್ಯವಾಗಲಿವೆ. ವ್ಯಾಪಾರ ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗುವುದು. ಕಲೆ ಮತ್ತು ಸಾಹಿತ್ಯ ವೇದಿಕೆ, ಮಹಿಳಾ ವೇದಿಕೆ, ಯುವ ವೇದಿಕೆ, ಆರೋಗ್ಯ ಹಾಗೂ ಆಧ್ಯಾತ್ಮಿಕ ವೇದಿಕೆ ಸೇರಿ ವಿವಿಧ ವೇದಿಕೆಗಳಲ್ಲಿ ಚರ್ಚೆಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.  

‘ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹಾಗೂ ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ’ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.