ADVERTISEMENT

ಆರು ವಾರದಲ್ಲಿ 13 ಒಂಟೆಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 19:53 IST
Last Updated 20 ಜುಲೈ 2021, 19:53 IST
ಸಂರಕ್ಷಿಸಲಾದ ಒಂಟೆಗಳು
ಸಂರಕ್ಷಿಸಲಾದ ಒಂಟೆಗಳು   

ಬೆಂಗಳೂರು: ನಗರಕ್ಕೆ ಕಳ್ಳಸಾಗಣೆಯಾಗುತ್ತಿದ್ದ ಒಂಟೆಗಳನ್ನು ಸ್ವಯಂಸೇವಾ ಸಂಸ್ಥೆಗಳ ನೆರವಿನಿಂದ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ತುಮಕೂರು ರಸ್ತೆ ಹಾಗೂ ಸರ್ಜಾಪುರ ರಸ್ತೆಯಲ್ಲಿ ಸಾಗಿಸುತ್ತಿದ್ದ ಒಟ್ಟು 13 ಒಂಟೆಗಳನ್ನು ಆರು ವಾರಗಳಲ್ಲಿ ಸಂರಕ್ಷಣೆ ಮಾಡಲಾಗಿದೆ.

‘ಒಂಟೆಗಳ ಸಂತತಿ ಅಪಾಯದಲ್ಲಿದೆ. ಹಾಗಾಗಿ ಅವುಗಳಿಗೆ ಕಾನೂನಡಿ ವಿಶೇಷ ರಕ್ಷಣೆ ಒದಗಿಸಲಾಗಿದೆ. ಹೈಕೋರ್ಟ್‌ ಕೂಡಾ ಈ ಕುರಿತು ಆದೇಶ ಮಾಡಿದೆ. ಒಂಟೆಗಳ ಸ್ವಾಭಾವಿಕ ಆವಾಸವಲ್ಲದ ಪ್ರದೇಶಗಳಿಗೆ ಅವುಗಳನ್ನು ಅನಧಿಕೃತವಾಗಿ ಸಾಗಾಟ ನಡೆಸುವಂತಿಲ್ಲ. ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ನಗರಕ್ಕೆ ಒಂಟೆಗಳ ಕಳ್ಳಸಾಗಣೆ ನಡೆಯುತ್ತದೆ. ನಗರಕ್ಕೆ ತರುತ್ತಿದ್ದ ಒಂಟೆಗಳನ್ನು ಸ್ವಯಂಸೇವಾ ಸಂಘಟನೆಗಳ ಸಹಾಯದಿಂದ ಸಂರಕ್ಷಣೆ ಮಾಡಲಾಗಿದೆ’ ಎಂದು ಬಿಬಿಎಂಪಿ ಪಶುಸಂಗೋಪನಾ ವಿಭಾಗದ ಜಂಟಿ ನಿರ್ದೇಶಕ ಎಸ್‌.ಎಂ.ಮಂಜುನಾಥ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂಟೆಗಳ ಸಾಗಣೆಗೆ ನಿಷೇಧ ಹೇರಿದ್ದರೂ ಅವುಗಳ ಕಳ್ಳಸಾಗಣೆ ನಡೆಯುತ್ತಲೇ ಇದೆ. ಮೂರು–ನಾಲ್ಕು ರಾಜ್ಯಗಳ ಗಡಿಗಳನ್ನು ದಾಟಿಸಿಕೊಂಡು ಅವುಗಳನ್ನು ರಾಜ್ಯಕ್ಕೆ ತರಲಾಗುತ್ತಿದೆ. ಅವುಗಳ ಕಳ್ಳಸಾಗಣೆ ಹಾಗೂ ವಧೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದೆವು. ಪೊಲೀಸ್‌ ಇಲಾಖೆ, ಬಿಬಿಎಂಪಿ, ಪಶುಸಂಗೋಪನಾ ಇಲಾಖೆಗಳಿಗೂ ಈ ಬಗ್ಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದೆವು. ನಗರಕ್ಕೆ ಕಳ್ಳಸಾಗಣೆಯಾಗುತ್ತಿದ್ದ 13 ಒಂಟೆಗಳಲ್ಲಿ 11 ಒಂಟೆಗಳ ಪ್ರಾಣ ಉಳಿಸಲು ನಮ್ಮ ಸಂಘಟನೆ ನೆರವಾಗಿದೆ. ತುಮಕೂರು ರಸ್ತೆಯ ಮೂಲಕ ಒಟ್ಟು 11 ಒಂಟೆಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಅವುಗಳಲ್ಲಿ ಎರಡು ಒಂಟೆಗಳು ವಾಹನದಲ್ಲೇ ಸತ್ತಿದ್ದವು. ಅಷ್ಟು ಕ್ರೂರವಾಗಿ ಅವುಗಳನ್ನು ನಡೆಸಿಕೊಳ್ಳಲಾಗಿತ್ತು’ ಎಂದು ‘ಗೌ ಗ್ಯಾನ್‌ ಫೌಂಡೇಷನ್‌’ನ ಸ್ವಯಂಸೇವಕರೊಬ್ಬರು ತಿಳಿಸಿದರು.

ADVERTISEMENT

‘ಸಂರಕ್ಷಿಸಲಾದ ಒಂಟೆಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಮಹದೇವಪುರದ ದೊಡ್ಡನೆಕ್ಕುಂದಿಯ ಗೋ ಸಂರಕ್ಷಣಾ ಗೋಶಾಲೆಯಲ್ಲಿ ಆರೈಕೆ ಮಾಡಲಾಗುತ್ತಿದೆ’ ಎಂದು ಸಂಸ್ಥೆಯ ಇನ್ನೊಬ್ಬ ಸ್ವಯಂಸೇವಕರು ಮಾಹಿತಿ ನೀಡಿದರು.

‘ಒಂಟೆಗಳು ಸೂಕ್ಷ್ಮ ಜೀವಿಗಳು. ಅವುಗಳು ಬದುಕುವ ಪರಿಸರ ಬೇರೆ. ನಮ್ಮ ರಾಜ್ಯದ ಹವಾಗುಣ ಅವುಗಳಿಗೆ ಒಗ್ಗುವುದಿಲ್ಲ. ಅವುಗಳಿಗೆ ಇಲ್ಲಿ ಸಣ್ಣಪುಟ್ಟ ಗಾಯಗಳಾದರೂ ಗ್ಯಾಂಗ್ರೀನ್‌ ರೂಪ ತಳೆಯುತ್ತದೆ. ಅವುಗಳ ಸಂತತಿಯೂ ಅಪಾಯದಲ್ಲಿರುವುದರಿಂದ ಅವುಗಳ ವಧೆ ಹಾಗೂ ಕಳ್ಳಸಾಗಣೆ ತಡೆಯಲು ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ನಿಯಮ ಪಾಲಿಸಿ– ಹಬ್ಬ ಆಚರಿಸಿ’

‘ಬಕ್ರೀದ್‌ ಹಬ್ಬದ ಆಚರಣೆಗೆ ಸಂಬಧಿಸಿ ಸರ್ಕಾರ ನಿರ್ದೇಶನಗಳನ್ನು ನೀಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿಗಳ ಅನಧಿಕೃತ ವಧೆ ತಡೆಗೆ ಸಂಬಂಧಿಸಿ ಬಿಬಿಎಂಪಿಯೂ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳನ್ನು ಅನುಸರಿಸಿ ಹಬ್ಬ ಆಚರಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ನಿಯಮ ಉಲ್ಲಂಘನೆ ತಡೆಯಲು ಪಾಲಿಕೆಯ ಸ್ಥಳೀಯ ಹಂತದ ಅಧಿಕಾರಿಗಳಿಗೂ ನಿರ್ದೇಶನಗಳನ್ನು ನೀಡಿದ್ದೇವೆ’ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.