ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲೇ ₹118 ಕೋಟಿ ಮೊತ್ತದ ಕಾಮಗಾರಿಗಳ ಹಗರಣದಲ್ಲಿ ಸಿಲುಕಿರುವ ಕೆಆರ್‌ಐಡಿಎಲ್, 2015ರಿಂದ ಆರು ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯ ದಾಖಲೆ ಪ್ರಕಾರ ₹13 ಸಾವಿರ ಕೋಟಿ ಮೊತ್ತದ ಕಾಮಗಾರಿಗಳನ್ನು ನಡೆಸಿದೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಿಧಾನಸಭೆ ಕ್ಷೇತ್ರದಲ್ಲೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದಿಂದ (ಕೆಆರ್‌ಐಡಿಎಲ್) ವಿವಿಧ ಕಾಮಗಾರಿಗಳನ್ನು ನಿರ್ವಹಿಸಿದೆ. ಇಲ್ಲೆಲ್ಲ ಸಾವಿರಾರು ಕೋಟಿ ಮೊತ್ತದ ಅವ್ಯವಹಾರವಾಗಿರುವ ಬಗ್ಗೆ ಎಸಿಬಿಯಲ್ಲಿ 2022ರ ಮಾರ್ಚ್ 15ರಂದು ದೂರು ದಾಖಲಾಗಿತ್ತು. ಅದು ಇದೀಗ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದು, ವಿಚಾರಣೆ ಆರಂಭವಾಗಿದೆ.
ನಕಲಿ ಬಿಲ್ ಹಗರಣದಲ್ಲಿ ₹113 ಕಾಮಗಾರಿಗಳನ್ನು ನಡೆಸಿಲ್ಲದಿರುವುದು ಸಾಬೀತಾದ ಮೇಲೆ, ಲೋಕಾಯುಕ್ತರು ಕೆಆರ್‌ಐಡಿಎಲ್ ನಿರ್ವಹಿಸಿರುವ ಎಲ್ಲ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಸಲಹೆ ನೀಡಿದ್ದರು. ಇದೀಗ ₹13 ಸಾವಿರ ಕೊಟಿ ಮೊತ್ತದ ಕಾಮಗಾರಿ ವಿರುದ್ಧ ದೂರನ್ನು ಲೋಕಾಯುಕ್ತ ತನಿಖೆ ಮಾಡಲಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್.ಆರ್. ನೀಡಿರುವ ದೂರಿನಲ್ಲಿ, 2015–16ರಿಂದ 2020–21ರವರೆಗಿನ ಆರು ವರ್ಷದ ಅವಧಿಯಲ್ಲಿ ₹12,943,83,44,615 ಮೊತ್ತದ ಅನುದಾನವನ್ನು ಕೆಆರ್‌ಐಡಿಎಲ್ ಮೂಲಕ ನಿರ್ವಹಿಸುವ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಕಾರ್ಯಾದೇಶಗಳ ಸಹಿತದ ಮಾಹಿತಿಯನ್ನು 3,892 ಪುಟಗಳಲ್ಲಿ ನೀಡಲಾಗಿದೆ. ಇದೇ ಅವಧಿಯಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯ ಮೂಲಕ ಕಾಮಗಾರಿ ಪೂರ್ಣಗೊಳಿಸಿರುವ ‘ಉಪ ಗುತ್ತಿಗೆದಾರರಿಗೆ’ ₹8092,56,30,831 ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಬಿಬಿಎಂಪಿಯಿಂದ ಅಧಿಕೃತವಾಗಿ ಪಡೆಯಲಾಗಿರುವ 6,932 ಪುಟಗಳ ದಾಖಲೆಯನ್ನೂ ಸಲ್ಲಿಸಿದ್ದಾರೆ.
ಕೆಆರ್‌ಐಡಿಎಲ್ ವತಿಯಿಂದ ಅತಿ ತುರ್ತು ಕಾಮಗಾರಿಗಳನ್ನು ಮೇಯರ್ ಹಾಗೂ ಉಪ ಮೇಯರ್ ಅನುದಾನಗಳ ಮೂಲಕ ಕೈಗೊಳ್ಳಬೇಕು ಎಂದು ಸರ್ಕಾರದ ಆದೇಶಗಳಲ್ಲಿದೆ. ಆದರೆ, ಎಂಜಿನಿಯರ್‌ಗಳ ತಂಡವನ್ನು ಹೊಂದದೆ, ಕಾಮಗಾರಿಯನ್ನು ಪಡೆದು ಉಪ ಗುತ್ತಿಗೆದಾರರಿಗೆ ಅದನ್ನು ವಹಿಸುವುದಷ್ಟೇ ಕೆಆರ್‌ಐಡಿಎಲ್ ಕೆಲಸವಾಗಿದೆ. ಉಪ ಗುತ್ತಿಗೆದಾರರಿಗೆ ‘ಗ್ರೂಪ್ ಲೀಡರ್’ ಎಂಬ ಹೆಸರು ಕೊಡಲಾಗುತ್ತದೆ. ಪ್ರತಿಯೊಂದು ಕಾಮಗಾರಿಗೆ ಅಂದಾಜು ಮೊತ್ತದ ಶೇ 11ರಷ್ಟು ಸೇವಾ ಶುಲ್ಕವನ್ನು ಕೆಆರ್‌ಐಡಿಎಲ್ ಪಡೆದುಕೊಳ್ಳುತ್ತದೆ.
ಕೆಆರ್‌ಐಡಿಎಲ್‌ಗೆ ವಹಿಸಲಾಗಿರುವ ಕಾಮಗಾರಿಗಳಲ್ಲಿ ಶೇ 50ರಷ್ಟರಲ್ಲಿ ನಿರ್ವಹಣೆ ಮಾಡದೆ, ಕಾಮಗಾರಿಗಳನ್ನು ನಿರ್ವಹಿಸಿರುವುದಿಲ್ಲ. ಗಾಂಧಿನಗರ ವಿಧಾನಸಭೆ ಕ್ಷೇತ್ರದಲ್ಲಿ 13 ಪ್ರಕರಣಗಳಲ್ಲಿ ಇಂತಹ ಹಗರಣ ಬೆಳಕಿಗೆ ಬಂದು ಆರೋಪಿಗಳ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
‘ಹೀಗಾಗಿ, 13 ಸಾವಿರ ಕೋಟಿ ಮೊತ್ತದ ಕೆಆರ್‌ಐಡಿಎಲ್ ಕಾಮಗಾರಿಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಬೇಕು. ಬೇನಾಮಿ ಉಪ ಗುತ್ತಿಗೆದಾರಿಗೆ ಹಣ ಬಿಡುಗಡೆ ಮಾಡಿದವರು ಮತ್ತು ಹಣ ಪಡೆದವರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು’ ಎಂದು ರಮೇಶ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.