ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ 15ನೇ ಹಣಕಾಸು ಆಯೋಗದ 2022–23ನೇ ಸಾಲಿನ ₹291 ಕೋಟಿ ಅನುದಾನದ ಕ್ರಿಯಾಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ.
ಬಿಬಿಎಂಪಿಯಲ್ಲಿ ನೀರು ಸರಬರಾಜು, ನೈರ್ಮಲ್ಯ, ಕೆರೆಗಳ ಪುನರುಜ್ಜೀವನ ಮತ್ತು ಘನತ್ಯಾಜ್ಯ ನಿರ್ವಹಣೆಗೆ 2023ರ ಮೇ 25ರಂದು ಹಣ ಬಿಡುಗಡೆ ಆಗಿತ್ತು. ಅದರಂತೆ ಸೆ.6ರಂದು ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಗತ್ಯವಿರುವ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಲಾಗಿತ್ತು.
ಕ್ರಿಯಾಯೋಜನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಡಿ.11ರಂದು ‘ಸೂಕ್ಷ್ಮಮಟ್ಟದ ಕ್ರಿಯಾಯೋಜನೆ’ ಕಾಮಗಾರಿಗಳ ಪಟ್ಟಿಗೆ ಸರ್ಕಾರ ಷರತ್ತುಬದ್ಧ ಅನುಮೋದನೆ ನೀಡಿದೆ.
ಅನುಮೋದನೆ ನೀಡಲಾಗಿರುವ ಕ್ರಿಯಾಯೋಜನೆಯ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ಪಡೆದು, ₹10 ಕೋಟಿಗೆ ಕಡಿಮೆ ಇರದಂತೆ ಪ್ಯಾಕೇಜ್ ಮಾಡಿ, ಕೆಟಿಪಿಪಿ ಕಾಯ್ದೆಯಂತೆ ಇ–ಪ್ರೊಕ್ಯೂರ್‌ಮೆಂಟ್‌ನಲ್ಲಿ ಟೆಂಡರ್ ಕರೆಯಬೇಕು.
‘ಸೂಕ್ಷ್ಮಮಟ್ಟದ ಕ್ರಿಯಾಯೋಜನೆ’ ಕಾಮಗಾರಿಗಳ ಅನುಷ್ಠಾನದ ಪ್ರಗತಿ ಕುರಿತು ಪರಿಶೀಲನೆ ಮತ್ತು ಮೇಲ್ವಿಚಾರಣೆಗೆ ಆನ್‌ಲೈನ್ ತಂತ್ರಾಂಶ ಸಿದ್ಧಪಡಿಸಿ, ತಿಂಗಳುವಾರು ಪ್ರಗತಿಯನ್ನು ಅಪ್‌ಲೋಡ್ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.
ಒತ್ತುವರಿ ತೆರವಿನ ನಂತರ ಅಭಿವೃದ್ಧಿ: ಕೆರೆಗಳ ಪುನರುಜ್ಜೀವನ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸುವ ಮುನ್ನ ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು ಕ್ರಿಯಾಯೋಜನೆಗೆ ಅನುಮತಿ ನೀಡಿರುವ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಕೆರೆಗಳ ಗ್ರಾಮ ನಕ್ಷೆ, ಸರ್ವೆ ನಕ್ಷೆಯಂತೆ ಗಡಿರೇಖೆಗಳನ್ನು ಸರಿಯಾಗಿ ಗುರುತಿಸಬೇಕು. ಯಾವುದೇ ಒತ್ತುವರಿಗಳನ್ನು ತೆರವುಗೊಳಿಸಿದ ಮೇಲೆ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.