ಬೆಂಗಳೂರು: ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳು, ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸದೇ ಇರುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರು ತಿಂಗಳು ಕಳೆದರೂ 15ನೇ ಹಣಕಾಸು ಆಯೋಗದ ಅನುದಾನವೇ ರಾಜ್ಯಕ್ಕೆ ಬಿಡುಗಡೆಯಾಗಿಲ್ಲ. ಇದರಿಂದ ಸ್ವಂತ ವರಮಾನ ವಿಲ್ಲದ ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 2024–25ನೇ ಆರ್ಥಿಕ ವರ್ಷದಲ್ಲಿ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹2,637 ಕೋಟಿ ನಿಗದಿಯಾಗಿದೆ. ಈ ಪೈಕಿ ₹2,221.45 ಕೋಟಿ (ಶೇ 85ರಷ್ಟು) ಗ್ರಾಮ ಪಂಚಾಯಿತಿಗಳಿಗೆ ದೊರಕಲಿದೆ. ₹263.10 ಕೋಟಿ (ಶೇ 10ರಷ್ಟು) ತಾಲ್ಲೂಕು ಪಂಚಾಯಿತಿಗಳಿಗೆ, ₹131.85 ಕೋಟಿ (ಶೇ 5ರಷ್ಟು) ಜಿಲ್ಲಾ ಪಂಚಾಯಿತಿಗಳಿಗೆ ನಿಗದಿಯಾಗಿದೆ.
15ನೇ ಹಣಕಾಸು ಆಯೋಗದ ಅನುದಾನದಲ್ಲಿ ಹಲವು ರಾಜ್ಯಗಳು ಈಗಾಗಲೇ ಮೊದಲ ಕಂತು ಪಡೆದಿದ್ದು, ಕೆಲವು ರಾಜ್ಯಗಳಿಗೆ ಎರಡನೇ ಕಂತಿನ ಅನುದಾನವೂ ಬಿಡುಗಡೆಯಾಗಿದೆ. ಆದರೆ, ರಾಜ್ಯಕ್ಕೆ ಮೊದಲ ಕಂತಿನ ಅನುದಾನವನ್ನೂ ಬಿಡುಗಡೆ ಮಾಡಿಲ್ಲ.
‘ಪ್ರತಿ ವರ್ಷವೂ ಜೂನ್ ತಿಂಗಳಲ್ಲೇ ಹಣಕಾಸು ಆಯೋಗದ ಅನುದಾನದಲ್ಲಿ ಮೊದಲ ಕಂತನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗುತ್ತಿತ್ತು. ಈ ಬಾರಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಇ–ಸ್ವರಾಜ್ ಪೋರ್ಟಲ್‌ನಲ್ಲಿ ದಾಖಲೆಗಳನ್ನು ಅಪ್ ಲೋಡ್ ಮಾಡುವುದರಲ್ಲಿ ವಿಳಂಬ ಮಾಡಿದೆ. ಇದರಿಂದ ಕೇಂದ್ರವು ಅನುದಾನವನ್ನು ತಡೆ ಹಿಡಿದಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಕೇಂದ್ರ ಹಣಕಾಸು ಸಚಿವಾಲಯವು 2021ರ ಜುಲೈ 14ರಂದು ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಹಿಂದಿನ ವರ್ಷದ ಲೆಕ್ಕಪತ್ರ, ಹಿಂದಿನ ವರ್ಷದ ವೆಚ್ಚಗಳಿಗೆ ಸಂಬಂಧಿಸಿದ ಲೆಕ್ಕಪರಿಶೋಧನಾ ವರದಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು ಸಕಾಲಕ್ಕೆ ಅಪ್‌ಲೋಡ್ ಮಾಡಿದರೆ ಜೂನ್‌ನಲ್ಲೇ ಅನುದಾನದ ಮೊದಲ ಕಂತು ಬಿಡುಗಡೆ ಮಾಡಬೇಕು. ಅದೇ ಸುತ್ತೋಲೆಯನ್ನು 15ನೇ ಹಣಕಾಸು ಆಯೋಗದ ಅನುದಾನದ ಬಿಡುಗಡೆಗೆ ಈಗಲೂ ಆಧಾರವಾಗಿ ಬಳಸಲಾಗುತ್ತಿದೆ.
ಸೆ. 27ರಂದು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮಾರ್ಗಸೂಚಿ ಹೊರಡಿಸಿರುವ ಪಂಚಾಯತ್ ರಾಜ್ ಇಲಾಖೆ ಅಭಿವೃದ್ಧಿ ವಿಭಾಗದ ನಿರ್ದೇಶಕರು, ಪ್ರಸಕ್ತ ವರ್ಷದಲ್ಲಿ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ದೊರಕುವ ಮೊತ್ತಕ್ಕೆ ಕ್ರಿಯಾಯೋಜನೆ ರೂಪಿಸಿ, ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
‘ಶೇ 60ರಷ್ಟು ನಿರ್ಬಂಧಿತ ಅನುದಾನ ಮತ್ತು ಶೇ 40ರಷ್ಟು ಅನಿರ್ಬಂಧಿತ ಅನುದಾನದ ಬಳಕೆಗೆ ನಿರ್ದಿಷ್ಟಪಡಿಸಿದ ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾಯೋಜನೆಗಳನ್ನು ರೂಪಿಸಿ ಅಪ್‌ಲೋಡ್ ಮಾಡಬೇಕು’ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಗ್ರಾಮ ಪಂಚಾಯಿತಿಗಳಿಗೆ ಯೋಜನೆ ರೂಪಿಸಲಾಗದ ಪರಿಸ್ಥಿತಿ ಇದೆ. ಈಗ ಆಗಿರುವ ಸಮಸ್ಯೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೇ ಹೊಣೆಕಾಡಶೆಟ್ಟಿಹಳ್ಳಿ ಸತೀಶ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.