ADVERTISEMENT

ಬೆಂಗಳೂರಿನಲ್ಲಿ ‘170 ನಾಟ್‌ಔಟ್‌‘ ಅಂಚೆ ಚೀಟಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:46 IST
Last Updated 8 ಅಕ್ಟೋಬರ್ 2024, 14:46 IST
‘170 ನಾಟ್‌ಔಟ್‌ ಅಂಚೆ ಚೀಟಿ ಪ್ರದರ್ಶನ’ದಲ್ಲಿ ಪ್ರದರ್ಶಿಸಿರುವ ಅಂಚೆ ಚೀಟಿಗಳು
‘170 ನಾಟ್‌ಔಟ್‌ ಅಂಚೆ ಚೀಟಿ ಪ್ರದರ್ಶನ’ದಲ್ಲಿ ಪ್ರದರ್ಶಿಸಿರುವ ಅಂಚೆ ಚೀಟಿಗಳು   

ಬೆಂಗಳೂರು: ಭಾರತದಲ್ಲಿ ಅಂಚೆ ಚೀಟಿ ಆರಂಭವಾಗಿ 170 ವರ್ಷಗಳು ತುಂಬಿರುವ ನೆನಪಿಗಾಗಿ ಇಂಡ್‌ಡಾಕ್‌ (inddak) ವತಿಯಿಂದ ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್‌ ವರ್ಲ್ಡ್‌ ಕಲ್ಚರ್ ಸಭಾಂಗಣದಲ್ಲಿ ‘170 ನಾಟ್ ಔಟ್‌’ ಎಂಬ ಅಂಚೆ ಚೀಟಿ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಗಾಂಧಿ ಜಯಂತಿಯಂದು ಅಂಚೆ ಚೀಟಿ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದ್ದು, ಅ.30ರವರೆಗೆ ಪ್ರದರ್ಶನ ಮುಂದುವರಿಯಲಿದೆ.

ಗಾಂಧೀಜಿಯವರ 155ನೇ ಜನ್ಮ ವರ್ಷಾಚರಣೆ ಆಗಿರುವುದರಿಂದ ಗಾಂಧೀಜಿಯವರಿಗೆ ಸಂಬಂಧಿಸಿದ ಅನೇಕ ಅಂಚೆ ಚೀಟಿಗಳನ್ನು ಪ್ರದರ್ಶನಲ್ಲಿಡಲಾಗಿದೆ. ಈ ಪ್ರದರ್ಶನದಲ್ಲಿ ಭಾರತದ್ದಲ್ಲದೇ, ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಸೇರಿದಂತೆ ಬೇರೆ ದೇಶಗಳು ಬಿಡುಗಡೆ ಮಾಡಿರುವ ಮಹಾತ್ಮ ಗಾಂಧಿ ಭಾವಚಿತ್ರವಿರುವ ಅಂಚೆ ಚೀಟಿಗಳೂ ಇವೆ.‌

ADVERTISEMENT

ಭಾರತದಲ್ಲಿ 1854ರ ಅಕ್ಟೋಬರ್ 1ರಂದು ಮೊದಲಿಗೆ ಅಂಚೆ ಚೀಟಿಗಳನ್ನು ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೆ ಬಿಡುಗಡೆಯಾಗಿರುವ ಪ್ರಮುಖ ಅಂಚೆ ಚೀಟಿಗಳನ್ನು ಪ್ರದರ್ಶನದಲ್ಲಿಡಲಾಗಿದೆ. 90 ಫ್ರೇಮ್‌ಗಳಲ್ಲಿ ಸಾವಿರಕ್ಕೂ ಹೆಚ್ಚು ವಿಶೇಷವಾದ ಅಂಚೆ ಚೀಟಿಗಳು ಮತ್ತು ಪೋಸ್ಟ್‌ ಕಾರ್ಡ್‌ಗಳನ್ನು ವೀಕ್ಷಿಸಬಹುದು. 

ಗಮನ ಸೆಳೆವ ಚೀಟಿಗಳು:

1840ರಲ್ಲಿ ಗ್ರೇಟ್ ಬ್ರಿಟನ್ ಬಿಡುಗಡೆ ಮಾಡಿದ ವಿಶ್ವದ ಮೊದಲ ಸ್ಟ್ಯಾಂಪ್ ‘ದಿ ಪೆನ್ನಿ ಬ್ಲ್ಯಾಕ್‘, 1854ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಬ್ರಿಟಿಷ್ ಇಂಡಿಯಾದ ಮೊದಲ ಸ್ಟಾಂಪ್ ‘ದಿ ಹಾಫ್-ಅನ್ನಾ ಲಿಥೋಗ್ರಾಫ್‘, 1869ರ ಜುಲೈನಲ್ಲಿ ಬಿಡುಗಡೆಯಾದ ಬ್ರಿಟಿಷ್ ಇಂಡಿಯಾದ ಮೊದಲ ಪೋಸ್ಟ್ ಕಾರ್ಡ್, ವಿಶ್ವದ ಮೊದಲ ಏರ್ ಮೇಲ್ - 1911 (ಅಲಹಾಬಾದ್ ಟು ನೈನಿ), ಭಾರತದ ರಾಕೆಟ್ ಮೇಲ್, ಪಿಜನ್ ಮೇಲ್ ಪೋಸ್ಟಲ್‌ ಕವರ್‌, ಅಂಚೆ ಲಕೋಟೆ, ಕಾರ್ಡ್‌ ಮತ್ತು ಅಂಚೆ ಚೀಟಿಗಳು ಮತ್ತು 1947ರ ಆಗಸ್ಟ್ 15ರ ನೆನಪಿಗಾಗಿ ಬಿಡುಗಡೆ ಮಾಡಿದ ‘ಜೈ ಹಿಂದ್’ ನಂತಹ ವಿಶೇಷ ಅಂಚೆ ಚೀಟಿಗಳು ಗಮನ ಸೆಳೆಯುತ್ತವೆ.

‘170 ನಾಟ್ ಔಟ್‘ ಅಂಚೆ ಚೀಟಿ ಪ್ರದರ್ಶನಕ್ಕೆ ಭೇಟಿ ನೀಡುವ ಮೂಲಕ ಭಾರತದ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಪರಂಪರೆ ಮತ್ತು ಅಂಚೆ ವ್ಯವಸ್ಥೆಯ ವಿಕಾಸದ ಬಗ್ಗೆ ಆಳವಾದ ತಿಳಿವಳಿಕೆಯನ್ನು ಪಡೆಯಬಹುದು’ ಎನ್ನುತ್ತಾರೆ ಅಂಚೆ ಚೀಟಿ ಸಂಗ್ರಹಕಾರ ಮತ್ತು ಪ್ರದರ್ಶನದ ಆಯೋಜಕ ರಾಮು ಶ್ರೀನಿವಾಸ.

ಜ್ಞಾನಪೀಠ ಪುರಸ್ಕತರು ನೋಬೆಲ್ ಪುರಸ್ಕೃತರು ಡಾ. ರಾಜ್‌ಕುಮಾರ್ ಪಕ್ಷಿ ಪ್ರಪಂಚದ 27 ಪ್ರಭೇದಗಳ ಅಂಚೆ ಚೀಟಿಗಳಿವೆ. ಸರೀಸೃಪಗಳದ್ದೇ ಪ್ರತ್ಯೇಕ ಅಂಚೆ ಚೀಟಿಗಳೂ ಪ್ರದರ್ಶನದಲ್ಲಿವೆ.
ರಾಮು ಶ್ರೀನಿವಾಸ, ಅಂಚೆ ಚೀಟಿ ಸಂಗ್ರಹಕಾರರು
ಅಂಚೆ ಚೀಟಿ ಪ್ರದರ್ಶನ ವೀಕ್ಷಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.