ADVERTISEMENT

ಪತ್ತಿನ ಸಹಕಾರ ಮಹಾಮಂಡಳದಲ್ಲಿ ₹19ಕೋಟಿ ಅಕ್ರಮ: ಮಾಜಿ CEOಸೇರಿ ಹಲವರ ವಿರುದ್ಧ FIR

ಖಾಸಗಿ ವ್ಯಕ್ತಿಗಳ ಖಾತೆಗೆ ಹಣ ವರ್ಗಾಯಿಸಿ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 0:58 IST
Last Updated 19 ಅಕ್ಟೋಬರ್ 2024, 0:58 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳವು ಬೆಂಗಳೂರು ನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಬಿಡಿಸಿಸಿ) ಮತ್ತು ರಾಜ್ಯ ಅಪೆಕ್ಸ್‌ ಸಹಕಾರಿ ಬ್ಯಾಂಕ್‌ನಲ್ಲಿ ಇರಿಸಿದ್ದ ನಿಗದಿತ ಠೇವಣಿ (ಎಫ್‌ಡಿ) ಖಾತೆಗಳಿಂದ ₹19.34 ಕೋಟಿಯನ್ನು ಕೆಲವು ವ್ಯಕ್ತಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ವಂಚಿಸಿರುವುದು ಪತ್ತೆಯಾಗಿದೆ.

ಈ ಸಂಬಂಧ ಮಹಾಮಂಡಳದ ಅಧ್ಯಕ್ಷ ರಾಜು ವಿ. ಅವರು ಸಲ್ಲಿಸಿದ್ದ ದೂರನ್ನು ಆಧರಿಸಿ ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಆಶಾಲತಾ ಪಿ., ಅವರ ಪತಿ ಸೋಮಶೇಖರ್‌ ಎನ್‌., ವಿಜಯ್‌ ಕಿರಣ್‌, ಮಂಜುನಾಥ್‌ ಜೆ., ಸುಜಯ್‌, ಬಿಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ ಶಾಖೆಗಳ ವ್ಯವಸ್ಥಾಪಕರು ಹಾಗೂ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಲೆಕ್ಕಪರಿಶೋಧಕರ ವಿರುದ್ಧ ನಗರದ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಗುರುವಾರ ಎಫ್‌ಐಆರ್‌ ದಾಖಲಿಸಲಾಗಿದೆ.

‘ಪ್ರಥಮ ದರ್ಜೆ ಸಹಾಯಕಿ ಕಂ ಅಕೌಂಟೆಂಟ್‌ ಹುದ್ದೆಗೆ ನೇಮಕಗೊಂಡಿದ್ದ ಆಶಾಲತಾ 2017ರಿಂದ 2023ರವರೆಗೂ ಮಹಾಮಂಡಳದ ಪ್ರಭಾರ ಸಿಇಒ ಆಗಿದ್ದರು. ಈ ಅವಧಿಯಲ್ಲಿ ಸಂಸ್ಥೆಯು ಬಿಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ ಶಾಖೆಗಳಲ್ಲಿ ನಿಗದಿತ ಠೇವಣಿಯಲ್ಲಿ ಇರಿಸಿದ್ದ ಮೊತ್ತವನ್ನು ತನ್ನ ಗಂಡ ಮತ್ತು ಇತರರ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚಿಸಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಸಹಕಾರ ಸಚಿವರು ಅ.9ರಂದು ರಾಜ್ಯದ ಪ್ರಮುಖ ಸಹಕಾರ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆ ನಡೆಸಿದ್ದರು. ಆಗ, ಪತ್ತಿನ ಸಹಕಾರ ಮಹಾಮಂಡಳದ ಠೇವಣಿಗಳ ಬಗ್ಗೆ ಪ್ರಶ್ನಿಸಿದ್ದರು. ಬಿಡಿಸಿಸಿ ಬ್ಯಾಂಕ್‌ ಮತ್ತು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಠೇವಣಿಗಳನ್ನು ಇರಿಸಿರುವುದಾಗಿ ಆಶಾಲತಾ ತಿಳಿಸಿದ್ದರು. ಅದೇ ಸಭೆಯಲ್ಲಿದ್ದ ಬಿಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರು, ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಯಾವುದೇ ಠೇವಣಿ ತಮ್ಮ ಬ್ಯಾಂಕ್‌ನಲ್ಲಿಲ್ಲ ಎಂದು ಹೇಳಿದ್ದರು. 111 ಎಫ್‌.ಡಿ. ಖಾತೆಗಳಿದ್ದು, ಮನೆಯಲ್ಲಿ ದಾಖಲೆಗಳಿವೆ. ಗಂಡ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹೊರಹೋಗಿದ್ದಾರೆ. ಸೋಮವಾರ ಎಲ್ಲ ದಾಖಲೆಗಳನ್ನೂ ಕಚೇರಿಗೆ ತಲುಪಿಸಲಾಗುವುದು ಎಂಬುದಾಗಿ ಆಶಾಲತಾ ತಿಳಿಸಿದ್ದರು’ ಎಂಬ ವಿವರ ಎಫ್‌ಐಆರ್‌ನಲ್ಲಿದೆ.

‘ಆ ಬಳಿಕ ಸಂಸ್ಥೆಯ ಹಣಕಾಸು ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಜಂಟಿ ಖಾತೆಯಾಗಿದ್ದರೂ, ಅಧ್ಯಕ್ಷರ ಸಹಿ ಇಲ್ಲದೆ ಸಿಇಒ ಒಬ್ಬರೇ ಸಹಿ ಮಾಡಿ ಹಣವನ್ನು ಪತಿ ಸೇರಿದಂತೆ ಕೆಲವು ವ್ಯಕ್ತಿಗಳ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಠೇವಣಿ ಮಾಡಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಲೆಕ್ಕಪರಿಶೋಧಕರಿಗೂ ಸಲ್ಲಿಸಿರುವುದು ಕಂಡುಬಂದಿದೆ. ಲೆಕ್ಕಪರಿಶೋಧಕರು ಕೂಡ ದಾಖಲೆಗಳನ್ನು ಪರಿಶೀಲಿಸದೇ ವರದಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.