ಬೆಂಗಳೂರು: ಕೋಳಿ ಅಂಗಡಿ ವಿಚಾರದಲ್ಲಿ ಉಂಟಾಗಿದ್ದ ವೈಷಮ್ಯದಿಂದಾಗಿ ನಿವೃತ್ತ ಎಂಜಿನಿಯರ್ ವೆಂಕಟೇಶಪ್ಪ ಅವರನ್ನು ಡ್ಯಾಗರ್‌ನಿಂದ ಇರಿದು ಹತ್ಯೆ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪದಡಿ ತಂದೆ–ಮಗನನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಜೆ.ಪಿ. ನಗರ ನಿವಾಸಿ ವೆಂಕಟೇಶಪ್ಪ, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್‌ನ (ಐಟಿಐ) ನಿವೃತ್ತ ಎಂಜಿನಿಯರ್. ಇವರನ್ನು ಕೊಲೆ ಮಾಡಿರುವ ಆರೋಪದಡಿ ಬಸವೇಶ್ವರನಗರದ ನಿವಾಸಿ ಅಭಿಷೇಕ್ (26) ಹಾಗೂ ಈತನ ತಂದೆ ನಾಗರಾಜಪ್ಪನನ್ನು (55) ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಮಾತುಕತೆ ನೆಪದಲ್ಲಿ ಸೋಮವಾರ ಮಧ್ಯಾಹ್ನ ಮನೆಗೆ ಬಂದಿದ್ದ ಆರೋಪಿಗಳು, ವೆಂಕಟೇಶಪ್ಪ ಅವರಿಗೆ ಡ್ಯಾಗರ್‌ನಿಂದ ಇರಿದು ಪರಾರಿಯಾಗಿದ್ದರು. ಪ್ರಕರಣ ದಾಖಲಾದ ಕೆಲ ಗಂಟೆಗಳಲ್ಲಿಯೇ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ತಿಳಿಸಿದರು.
ಹಲವು ದಿನಗಳ ವೈಷಮ್ಯ: ‘ವೆಂಕಟೇಶಪ್ಪ ಅವರಿಗೆ ಜೆ.ಪಿ. ನಗರ ಹಾಗೂ ಬಸವೇಶ್ವರನಗರ ಎರಡೂ ಕಡೆಯೂ ಪ್ರತ್ಯೇಕ ಮನೆಗಳಿದ್ದವು. ಸದ್ಯ ಜೆ.ಪಿ.ನಗರದಲ್ಲಿ ಪತ್ನಿ ಜೊತೆ ವಾಸವಿದ್ದ ವೆಂಕಟೇಶಪ್ಪ, ಆಗಾಗ ಬಸವೇಶ್ವರನಗರ ಮನೆಗೆ ಹೋಗಿ ಬರುತ್ತಿದ್ದರು. ಅದೇ ಮನೆ ಎದುರು ಆರೋಪಿ ಅಭಿಷೇಕ್ ಹಾಗೂ ನಾಗರಾಜಪ್ಪ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.
‘ಆರೋಪಿ ಅಭಿಷೇಕ್, ಬಿ.ಕಾಂ ಪದವೀಧರ. ನಾಗರಾಜಪ್ಪ, ಆಟೊ ಚಾಲಕ. ಕೆಲಸ ಸಿಗದಿದ್ದರಿಂದ ಅಭಿಷೇಕ್ ಮನೆಯಲ್ಲಿದ್ದ. ಆತನಿಗೆ ಕೋಳಿ ಮಾಂಸ ಮಾರಾಟ ಅಂಗಡಿ ಇಟ್ಟುಕೊಡಲು ನಾಗರಾಜಪ್ಪ ಯೋಚಿಸಿದ್ದ. ಅದಕ್ಕಾಗಿ ತಮ್ಮ ಮನೆ ನೆಲಮಹಡಿಯಲ್ಲಿ ಮಳಿಗೆ ತೆರೆಯಲು ಸಿದ್ಧತೆ ನಡೆಸುತ್ತಿದ್ದರು’ ಎಂದರು.
‘ಕೋಳಿ ಮಾಂಸ ಮಾರಾಟ ಅಂಗಡಿ ತೆರೆಯಲು ವಿರೋಧಿಸಿದ್ದ ವೆಂಕಟೇಶಪ್ಪ, ಸ್ಥಳೀಯರ ಮೂಲಕ ಒತ್ತಡ ಹೇರಿಸಿದ್ದರು. ಯಾವುದೇ ಕಾರಣಕ್ಕೂ ಅಂಗಡಿ ತೆರೆಯದಂತೆ ತಾಕೀತು ಮಾಡಿದ್ದರು. ‘ನಾನೇ ಹಣ ಕೊಡುತ್ತೇನೆ. ಕೋಳಿ ಮಾಂಸ ಅಂಗಡಿ ಬದಲು ಬೇರೆ ಅಂಗಡಿ ಮಾಡಿ’ ಎಂದು ವೆಂಕಟೇಶಪ್ಪ ಹೇಳಿದ್ದರು. ಅದಕ್ಕೆ ತಂದೆ–ಮಗ ಒಪ್ಪಿರಲಿಲ್ಲ’ ಎಂದು ಪೊಲೀಸರು ಹೇಳಿದರು.
ಡ್ಯಾಗರ್ ಸಮೇತ ಬಂದು ಕೊಲೆ: ‘ವೆಂಕಟೇಶಪ್ಪ ಬದುಕಿದರೆ ಕೋಳಿ ಮಾಂಸ ಮಾರಾಟ ಅಂಗಡಿ ತೆರೆಯಲು ಬಿಡುವುದಿಲ್ಲವೆಂದು ತಿಳಿದ ತಂದೆ–ಮಗ, ಕೊಲೆ ಮಾಡಲು ಸಂಚು ರೂಪಿಸಿದ್ದರು. ಮಾತುಕತೆ ನೆಪದಲ್ಲಿ ಡ್ಯಾಗರ್ ಸಮೇತ ಜೆ.ಪಿ.ನಗರದ ಮನೆಗೆ ಸೋಮವಾರ ಮಧ್ಯಾಹ್ನ ಬಂದಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಪರಿಚಯಸ್ಥರಾಗಿದ್ದರಿಂದ ಇಬ್ಬರನ್ನೂ ಬರಮಾಡಿಕೊಂಡಿದ್ದ ವೆಂಕಟೇಶಪ್ಪ, ಆತ್ಮೀಯತೆಯಿಂದ ಮಾತನಾಡುತ್ತಿದ್ದರು. ಚಹಾ ಮಾಡಿಕೊಂಡು ಬರುವಂತೆ ಪತ್ನಿಯನ್ನು ಅಡುಗೆ ಕೋಣೆಗೆ ಕಳುಹಿಸಿದ್ದರು. ಇದೇ ಸಂದರ್ಭದಲ್ಲಿ ಆರೋಪಿ ಅಭಿಷೇಕ್, ಏಕಾಏಕಿ ದಾಳಿ ಮಾಡಿ ಡ್ಯಾಗರ್‌ನಿಂದ ವೆಂಕಟೇಶಪ್ಪ ಅವರ ಹೊಟ್ಟೆಗೆ ಇರಿದಿದ್ದ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.