ಬೆಂಗಳೂರು: ನಗರದ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ತಜ್ಞ ವೈದ್ಯರು ‘ಡಿಸ್ಟೋನಿಯಾ’ ಎಂಬ ಅಪರೂಪದ ಕಾಯಿಲೆಯಿಂದಾಗಿ 20 ವರ್ಷದಿಂದ ಬಳಲುತ್ತಿದ್ದ ವಿದೇಶಿ ಗಿಟಾರ್ ವಾದಕರೊಬ್ಬರಿಗೆ ಮಿದುಳನ್ನು ಜಾಗೃತ ಸ್ಥಿತಿಯಲ್ಲಿರಿಸಿ ಶಸ್ತ್ರ ಚಿಕಿತ್ಸೆ ಮಾಡಿ, ಕಾಯಿಲೆಯನ್ನು ಗುಣಪಡಿಸಿದ್ದಾರೆ.
ಅಮೆರಿಕದ ಲಾಸ್‌ಏಂಜಲೀಸ್‌ನ ಜೋಸೆಫ್ ಡಿಸೋಜಾ(65) ಈ ಅಪರೂಪದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾದ ಗಿಟಾರ್ ವಾದಕ. ಆಸ್ಪತ್ರೆಯ ಡಾ. ಶರಣ್ ಶ್ರೀನಿವಾಸನ್ ಮತ್ತು ಡಾ. ಸಂಜೀವ್ ಸಿ.ಸಿ ನೇತೃತ್ವದ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.
ಈ ಬಗ್ಗೆ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶರಣ್ ಶ್ರೀವಾಸನ್, ‘ಜೋಸೆಫ್ ಡಿಸೋಜ ಅವರು ‘ಟಾಸ್ಕ್‌ಸ್ಪೆಸಿಫಿಕ್ ಫೋಕಲ್ ಹ್ಯಾಂಡ್ ಡಿಸ್ಟೋನಿಯಾ’ (ಟಿಎಸ್‌ಎಫ್‌ಎಚ್‌ಡಿ) ಎಂಬ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಕೈ ಹಾಗೂ ಬೆರಳುಗಳ ಸ್ನಾಯುಗಳು ಇದಕ್ಕಿದ್ದಂತೆ ಅಂಗೈಗೆ ಮುರುಟಿಕೊಳ್ಳುತ್ತಿದ್ದವು. ಇದರಿಂದ ಅವರಿಗೆ ಗಿಟಾರ್ ನುಡಿಸಲು ಕಷ್ಟವಾಗುತ್ತಿತ್ತು’ ಎಂದು ವಿವರಿಸಿದರು.
‘ಒಂದು ಲಕ್ಷದಲ್ಲಿ 30 ಮಂದಿಗೆ ಈ ಕಾಯಿಲೆ ಬರಬಹುದು. ಪ್ರಾಥಮಿಕ ಹಂತದಲ್ಲಿ ‘ಬಾಟುಲಿನಿಯಮ್’ ಇಂಜೆಕ್ಷನ್ ಸೇರಿದಂತೆ ವಿವಿಧ ಔಷಧೋಪಚಾರಗಳಿಂದ ಚಿಕಿತ್ಸೆ ನೀಡಬಹುದು. ಆದರೆ, ಅಂತಿಮವಾಗಿ ನರಶಸ್ತ್ರಚಿಕಿತ್ಸೆ ಮೂಲಕವೇ ರೋಗವನ್ನು ಗುಣಪಡಿಸಬೇಕಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.