ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಲಾಯಗಳಲ್ಲಿರುವ 800ಕ್ಕೂ ಹೆಚ್ಚು ಕುದುರೆಗಳ ಪೈಕಿ 200 ಕುದುರೆಗಳನ್ನು ಯಲಹಂಕದಲ್ಲಿರುವ ಸ್ಥಳವೊಂದಕ್ಕೆ ಸ್ಥಳಾಂತರಕ್ಕೆ ಪ್ರಯತ್ನ ನಡೆದಿದೆ ಎಂದು ಬಿಟಿಸಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಬಿಟಿಸಿಯಲ್ಲಿ ನಿಯಮ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಣಿ ದಯಾ ಸಂಘಟನೆ (ಕ್ಯೂಪ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠದಲ್ಲಿ ಗುರುವಾರ ನಡೆಯಿತು.
ಆಗ ಪ್ರತಿಕ್ರಿಯೆ ಸಲ್ಲಿಸಿದ ಬಿಟಿಸಿ ಪರ ವಕೀಲರು, ‘ಕುದುರೆ ಲಾಯಗಳ ದುರಸ್ತಿ ಕಾಮಗಾರಿ ನಡೆಯುತ್ತಿದೆ. 800 ಕುದುರೆಗಳ ಪೈಕಿ 200 ಕುದುರೆಗಳನ್ನು ಸ್ಥಳಾಂತರಿಸಲು ಯಲಹಂಕ ಬಳಿ ಪ್ರಶಸ್ತವಾದ ಸ್ಥಳವೊಂದನ್ನು ಗುರುತಿಸಲಾಗಿದೆ. ಜಮೀನು ಮಾಲೀಕರ ಜತೆ ಮಾತುಕತೆಯೂ ನಡೆಯುತ್ತಿದೆ’ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 100 ವರ್ಷಗಳಿಂದ ಕುದುರೆ ರೇಸ್ ನಡೆಯುತ್ತಿದೆ. ರಾಜ್ಯ ಸರ್ಕಾರವೂ ಇದರಿಂದ ಆದಾಯ ಪಡೆಯುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವನ್ನೂ ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಬಿಟಿಸಿ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿತು. ಈ ಕೋರಿಕೆಯನ್ನು ಮಾನ್ಯ ಮಾಡಲು ನಿರಾಕರಿಸಿದ ನ್ಯಾಯಪೀಠ, ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅರ್ಜಿದಾರರು ಇಂತಹ ಕೋರಿಕೆ ಸಲ್ಲಿಸಬಹುದು. ಆದರೆ, ಪ್ರತಿವಾದಿ ಸಲ್ಲಿಸಲು ಅವಕಾಶವಿಲ್ಲ’ ಎಂದು ತಿಳಿಸಿತು.
ಪ್ರಾಣಿ ಕಲ್ಯಾಣ ಮಂಡಳಿ ನಿಯೋಜಿಸಿದ್ದ ತಪಾಸಣಾ ಅಧಿಕಾರಿ ಸಲ್ಲಿಸಿರುವ ವರದಿಯನ್ನು ಉಲ್ಲೇಖಿಸಿದ ನ್ಯಾಯಪೀಠ, ‘ವರದಿ ಪ್ರಕಾರ ಬಿಟಿಸಿಯಲ್ಲಿನ ಕುದುರೆ ಲಾಯಗಳ ಪೈಕಿ ಶೇಕಡ 80ರಷ್ಟು ಮಾರ್ಗಸೂಚಿಗಳ ಪ್ರಕಾರ ಇಲ್ಲ. ವರದಿಯ ಶಿಫಾರಸುಗಳನ್ನು ಶೀಘ್ರದಲ್ಲಿ ಅನುಷ್ಠಾನಕ್ಕೆ ತರಬೇಕು’ ಎಂದು ಸೂಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.