ನವದೆಹಲಿ: ಕಸ ವಿಲೇವಾರಿ ನಿರ್ವಹಣಾ ಕಾಯ್ದೆಯನ್ನು ಸಮರ್ಪಕವಾಗಿ ಪಾಲಿಸದ ಕಾರಣಕ್ಕೆ ವಿಧಿಸಿರುವ ₹2.40 ಕೋಟಿ ಪರಿಸರ ಪರಿಹಾರವನ್ನು ಪಾವತಿಸಲು ಬಿಬಿಎಂಪಿಯ ಮಹದೇವಪುರ ವಲಯ ಮೀನಮೇಷ ಎಣಿಸುತ್ತಿದೆ.
ಕೆ.ಆರ್.ಪುರ ಸಮೀಪದ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಮಾಲಿನ್ಯ ಪ್ರಕರಣವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿಚಾರಣೆ ನಡೆಸುತ್ತಿದೆ. ಜಲ ಕಾಯದ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಎನ್‌ಜಿಟಿ ಸೂಚಿಸಿತ್ತು. ಮಂಡಳಿಯು ಮಂಗಳವಾರ ವರದಿ ಸಲ್ಲಿಸಿದೆ. ಬಿಬಿಎಂಪಿಯ ಧೋರಣೆ ಕುರಿತು ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.
‘ಕಾಯ್ದೆಯನ್ನು ಸಮರ್ಪಕವಾಗಿ ಪಾಲಿಸದ ಸ್ಥಳೀಯ ಸಂಸ್ಥೆಗಳು ಪರಿಸರ ಪರಿಹಾರವನ್ನು ಪಾವತಿಸಬೇಕು ಎಂದು ಎನ್‌ಜಿಟಿ ಆದೇಶ ಹೊರಡಿಸಿತ್ತು. ಆ ಪ್ರಕಾರ, ಬಿಬಿಎಂಪಿಯ ಎಂಟು ವಲಯಗಳು 24 ತಿಂಗಳ ಅವಧಿಗೆ ₹15.36 ಕೋಟಿ ಪರಿಸರ ಪರಿಹಾರ ಪಾವತಿಸಬೇಕಿದೆ. ಮಹದೇವಪುರ ವಲಯದ ಪರಿಸರ ಪರಿಹಾರದ ಬಗ್ಗೆ ಬಿಬಿಎಂಪಿಗೆ 2022ರ ಸೆಪ್ಟೆಂಬರ್‌ನಲ್ಲಿ ಪತ್ರ ಬರೆಯಲಾಗಿತ್ತು. ಆದರೆ, ಬಿಬಿಎಂಪಿ ಆಯುಕ್ತರು ಪ್ರತಿಕ್ರಿಯೆ ನೀಡಿಲ್ಲ. ಜತೆಗೆ, ಹಣ ಪಾವತಿಯೂ ಆಗಿಲ್ಲ’ ಎಂದು ಮಂಡಳಿಯು ವರದಿಯಲ್ಲಿ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ, ಬಿಬಿಎಂಪಿ ಅಧಿಕಾರಿಗಳನ್ನು ಒಳಗೊಂಡ ಅಧಿಕಾರಿಗಳ ಸಮಿತಿ ಸ್ಥಳ ಪರಿಶೀಲನೆ ನಡೆಸಿದೆ. ಅದರ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಈ ಜಲಕಾಯಕ್ಕೆ ಸಣ್ಣ ನೀರಾವರಿ ಇಲಾಖೆ ಬೇಲಿ ಹಾಕಿಲ್ಲ. ಕೆರೆಯ ಶೇ 85ರಷ್ಟು ಜಾಗದಲ್ಲಿ ಕಳೆ ಗಿಡಗಳು ಬೆಳೆದು ನಿಂತಿವೆ. ಜಲಕಾಯದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಕೆರೆಯ ಪೂರ್ವ ದಿಕ್ಕಿನಲ್ಲಿ ಎನ್.ಎಸ್.ಪ್ಯಾರಡೈಸ್ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮೀಸಲು ಪ್ರದೇಶದಲ್ಲಿ ಹಲವು ಮನೆಗಳು ನಿರ್ಮಾಣವಾಗಿವೆ. ಒತ್ತುವರಿ ತೆರವು ಕಾರ್ಯ ಆಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಈ ಕೆರೆಯ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಕೋರಿ ಸಾಮಾಜಿಕ ಹೋರಾಟಗಾರ ಜೆ. ಜಗನ್ ಕುಮಾರ್ ಅವರು ಎನ್‌ಜಿಟಿಗೆ ದೂರು ಸಲ್ಲಿಸಿದ್ದರು.
ಒತ್ತುವರಿ, ತ್ಯಾಜ್ಯ ಸುರಿಯುತ್ತಿರುವುದು ಹಾಗೂ ಸಣ್ಣ ನೀರಾವರಿ ಇಲಾಖೆಯೇ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆಯೇ ಕೆರೆ ಪ್ರದೇಶದಲ್ಲಿ ಜಾಕ್‌ವೆಲ್ ಹಾಗೂ ಪಂಪ್‌ಹೌಸ್ ನಿರ್ಮಿಸುತ್ತಿರುವ ಅಂಶಗಳನ್ನು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಐತಿಹಾಸಿಕವಾಗಿ ಮಹತ್ವ ಪಡೆದಿರುವ ಈ ವಿಶಾಲವಾದ ಕೆರೆಯಂಗಳವೂ ದಿನೇ ದಿನೇ ಕಿರಿದಾಗುತ್ತಿದೆ. ಒಳಚರಂಡಿಯ ಕೊಳಚೆ ನೀರು ಕೆರೆಯ ಒಡಲು ಸೇರುತ್ತಿದೆ. ಕಟ್ಟಡ ತ್ಯಾಜ್ಯ ಮತ್ತು ವೈದ್ಯಕೀಯ ತ್ಯಾಜ್ಯಗಳು ಹಾಗೂ ರಾಸಾಯನಿಕಗಳು ಈ ಕೆರೆಯಂಗಳವನ್ನು ಹಾಳುಗೆಡಹುತ್ತಿದ್ದರೆ, ಇನ್ನೊಂದೆಡೆ ಒತ್ತುವರಿಯಿಂದಾಗಿ ಈ ಜಲಕಾಯದ ಅಸ್ತಿತ್ವವೇ ಅಪಾಯಕ್ಕೆ ಸಿಲುಕಿದೆ ಎಂದು ಅವರು ದೂರಿದ್ದರು.
ಜಗನ್ ಕುಮಾರ್ ದೂರಿನ ಮೇರೆಗೆ, ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ, ಪರಿಸರ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿಯನ್ನು ಎನ್‌ಜಿಟಿ ರಚಿಸಿತ್ತು. ಈ ಸಮಿತಿಯು ಎನ್‌ಜಿಟಿಗೆ ವರದಿ ಸಲ್ಲಿಸಿತ್ತು. ಸಮಿತಿ ನಿರ್ದೇಶನ ಮೇರೆಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರು ಸರ್ವೇ ಕೈಗೊಂಡಿದ್ದರು. ಕೆರೆ ಒಟ್ಟು 508 ಎಕರೆ 16 ಗುಂಟೆಗಳಷ್ಟು ಪ್ರದೇಶ ಹೊಂದಿದೆ ಎಂದು ವಿವರ ನೀಡಿದ್ದರು. ಕೆರೆಯ ನಿರ್ವಹಣೆಗೆ ಹಾಗೂ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿದ ಇಲಾಖೆಗಳನ್ನು ಎನ್‌ಜಿಟಿ ತರಾಟೆಗೆ ತೆಗೆದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.