ADVERTISEMENT

ಮೂರು ತಿಂಗಳಲ್ಲಿ 242 ಹೆಣ್ಣುಭ್ರೂಣಗಳ ಹತ್ಯೆ: ತನಿಖೆ ವೇಳೆ ಆಘಾತಕಾರಿ ಮಾಹಿತಿ

ತಲೆಮರೆಸಿಕೊಂಡ ಇಬ್ಬರಿಗೆ ಶೋಧ, ತನಿಖೆ ವೇಳೆ ಆಘಾತ ಮಾಹಿತಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 16:14 IST
Last Updated 28 ನವೆಂಬರ್ 2023, 16:14 IST
Venugopala K.
   Venugopala K.

ಬೆಂಗಳೂರು: ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ತನಿಖೆ ವೇಳೆ ಆಘಾತಕಾರಿ ಮಾಹಿತಿಗಳು ಲಭಿಸುತ್ತಿವೆ.

ಬಂಧಿತ 9 ಆರೋಪಿಗಳು ಕಳೆದ ಮೂರು ತಿಂಗಳಲ್ಲಿ 242 ಮಂದಿ ಗರ್ಭಿಣಿಯರಿಗೆ ಗರ್ಭಪಾತ ಮಾಡಿಸಿರುವುದು ಪತ್ತೆಯಾಗಿದೆ.

ಪ್ರಕರಣದಲ್ಲಿ ಇದುವರೆಗೆ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ತಲೆಮರೆಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.

ADVERTISEMENT

‘ಬಂಧಿತರ ಪೈಕಿ ಒಬ್ಬ ಆರೋಪಿ, 2021ರಲ್ಲಿ ಅಪಹರಣ ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿದ್ದ’ ಎಂದು ಅವರು ತಿಳಿಸಿದರು.

ನೋಂದಣಿಯಾಗದ ಆಸ್ಪತ್ರೆ:

‘ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಲೋಪದೋಷಗಳು ಕಂಡು ಬಂದಿವೆ. ಚಂದನ್ ಬಲ್ಲಾಳ್, ತನ್ನ ಆಸ್ಪತ್ರೆಯನ್ನು ನೋಂದಣಿ ಮಾಡಿಸಿಕೊಂಡಿಲ್ಲ. ಅಲ್ಲದೇ ಮೈಸೂರಿನ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.

ಆರೋಪಿಗಳಿಗೆ ದಾವಣಗೆರೆಯ ನಂಟು:

ಪ್ರಕರಣದ ಮೊದಲ ಆರೋಪಿ, ಮಧ್ಯವರ್ತಿ ಶಿವಲಿಂಗೇಗೌಡನ ಪತ್ನಿ ಸುನಂದಾ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ವೀರೇಶ್ ಸ್ನೇಹಿತ ಸಿದ್ದೇಶ್ ತಲೆಮರೆಸಿಕೊಂಡಿದ್ದಾರೆ. ವೀರೇಶ್‌ ಹಾಗೂ ಸಿದ್ದೇಶ್‌ ಅವರು ಪುಟ್ಟ ಗಾತ್ರದ ಸ್ಕ್ಯಾನಿಂಗ್‌ ಯಂತ್ರವನ್ನು ನೀಡಿದ್ದರು. ಈ ಯಂತ್ರ  ತೀವ್ರ ನಿಗಾ ಘಟಕದಲ್ಲಿ ಇರುತ್ತದೆ. ಇವರಿಬ್ಬರಿಗೆ ಆ ಯಂತ್ರ ಹೇಗೆ ಲಭಿಸಿತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

3 ವರ್ಷ, 900 ಗರ್ಭಪಾತ:

ಆರೋಪಿಗಳು ಮೂರು ವರ್ಷಗಳಿಂದ 900ಕ್ಕೂ ಹೆಚ್ಚು ಗರ್ಭಪಾತ ಮಾಡಿದ್ದಾರೆ ಎಂಬ ಮಾಹಿತಿ ವಿಚಾರಣೆ ವೇಳೆ ಸಿಕ್ಕಿದೆ. ಈ ಹಿಂದೆ ಪ್ರತಿ ತಿಂಗಳು 25 ರಿಂದ 27 ಗರ್ಭಪಾತ ಮಾಡಿದ್ದರೆ, 2023ರ ಜುಲೈ 21ರಿಂದ ಅ.16ರ ವರೆಗೆ 242 ಗರ್ಭಪಾತ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು.

ಮೂವರಿಗೆ ಜಾಮೀನು:

ಬಂಧಿತ ಆರೋಪಿಗಳ ಪೈಕಿ ತಮಿಳುನಾಡು ಮೂಲದ ಮಕ್ಕಳ ತಜ್ಞ ತುಳಸಿರಾಮ್, ಮೈಸೂರಿನ ವೈದ್ಯ ಚಂದನ್ ಬಲ್ಲಾಳ್ ಪತ್ನಿ ಮೀನಾ, ಸ್ವಾಗತಕಾರಿಣಿ ನಜ್ಮಾ ಖಾನಂ ಅವರಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದು ಬಿಡುಗಡೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.