ADVERTISEMENT

ವಿಜ್ಞಾನ ನಗರಕ್ಕೆ 25 ಎಕರೆ ಜಮೀನು ಮಂಜೂರು: ಎನ್‌.ಎಸ್‌. ಬೋಸರಾಜು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 15:58 IST
Last Updated 6 ಮಾರ್ಚ್ 2024, 15:58 IST
ಎನ್‌.ಎಸ್‌. ಬೋಸರಾಜು
ಎನ್‌.ಎಸ್‌. ಬೋಸರಾಜು   

ಬೆಂಗಳೂರು: ದಕ್ಷಿಣ ಭಾರತದ ಮೊದಲ ವಿಜ್ಞಾನ ನಗರ ಸ್ಥಾಪನೆಗೆ ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ 25 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌. ಬೋಸರಾಜು ತಿಳಿಸಿದ್ದಾರೆ.

ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ದೇಶದಲ್ಲಿ ಮೂರು ವಿಜ್ಞಾನ ನಗರಗಳಿವೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ, ರಾಮನ್‌ ಸಂಶೋಧನಾ ಸಂಸ್ಥೆ ಸೇರಿದಂತೆ ಹಲವು ಅತ್ಯುನ್ನತ ಸಂಸ್ಥೆಗಳು ಬೆಂಗಳೂರಿನಲ್ಲಿವೆ. 400ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿರುವ ಬೆಂಗಳೂರಿನಲ್ಲಿ ವಿಜ್ಞಾನ ನಗರ ಸ್ಥಾಪಿಸುವಂತೆ ಕೇಂದ್ರ ಸಚಿವ ಕಿಶನ್‌ ರೆಡ್ಡಿ ಅವರಿಗೆ 2023ರ ಆಗಸ್ಟ್‌ 3ರಂದು ಮನವಿ ಸಲ್ಲಿಸಲಾಗಿತ್ತು’ ಎಂದಿದ್ದಾರೆ.

ವಿಜ್ಞಾನ ನಗರ ಸ್ಥಾಪನೆಗೆ 25 ಎಕರೆ ಜಮೀನು ಒದಗಿಸುವಂತೆ ಕೇಂದ್ರ ಸಚಿವರು ಸೂಚಿಸಿದ್ದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿತ್ತು. ಜಮೀನು ಒದಗಿಸುವ ಭರವಸೆಯನ್ನು ಅವರು ನೀಡಿದ್ದರು. ಈಗ ಆದಿನಾರಾಯಣ ಹೊಸಹಳ್ಳಿಯಲ್ಲಿ 25 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಜಮೀನು ಒದಗಿಸಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದು ದಕ್ಷಿಣ ಭಾರತದ ಮೊದಲ ಮತ್ತು ಅತ್ಯುತ್ತಮ ವಿಜ್ಞಾನ ನಗರವಾಗಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.