ADVERTISEMENT

ಬಿಬಿಎಂಪಿ ಅರಣ್ಯ ವಿಭಾಗ ಕಾರ್ಯಾಚರಣೆ: ಬೆಂಗಳೂರು ನಗರದಲ್ಲಿ 256 ಮರ ತೆರವು

​ಪ್ರಜಾವಾಣಿ ವಾರ್ತೆ
Published 11 ಮೇ 2024, 15:28 IST
Last Updated 11 ಮೇ 2024, 15:28 IST
ಬಿಬಿಎಂಪಿ ವ್ಯಾಪ್ತಿಯಲ್ಲಿ ಧರೆಗುರುಳಿದ ಮರಗಳನ್ನು ಕಟಾವು ಮಾಡಿ ಅದನ್ನು ಅರಣ್ಯ ವಿಭಾಗದ ಸಿಬ್ಬಂದಿ, ಡಂಪಿಂಗ್‌ ಯಾರ್ಡ್‌ಗಳಿಗೆ ಸಾಗಿಸಿದರು
ಬಿಬಿಎಂಪಿ ವ್ಯಾಪ್ತಿಯಲ್ಲಿ ಧರೆಗುರುಳಿದ ಮರಗಳನ್ನು ಕಟಾವು ಮಾಡಿ ಅದನ್ನು ಅರಣ್ಯ ವಿಭಾಗದ ಸಿಬ್ಬಂದಿ, ಡಂಪಿಂಗ್‌ ಯಾರ್ಡ್‌ಗಳಿಗೆ ಸಾಗಿಸಿದರು   

ಬೆಂಗಳೂರು: ನಗರದಲ್ಲಿ ಮೇ 6ರಿಂದ ಮೇ 10ರವರೆಗೆ ಮಳೆ–ಗಾಳಿಗೆ ಧರೆಗುರುಳಿದ 256 ಮರಗಳು ಹಾಗೂ 427 ರೆಂಬೆ–ಕೊಂಬೆಗಳನ್ನು ಬಿಬಿಎಂಪಿ ಅರಣ್ಯ ವಿಭಾಗವು ತೆರವುಗೊಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ಧರೆಗುರುಳುವ ಮರ, ರೆಂಬೆ/ಕೊಂಬೆಗಳ ತೆರವಿಗೆ ‘ಮರ ಕಟಾವು’ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ನಿಗದಿತ ಕಾಲಮಿತಿಯೊಳಗಾಗಿ ತೆರವುಗೊಳಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಪಾಲಿಕೆಯ ನಿಯಂತ್ರಣ ಕೊಠಡಿಗಳಿಗೆ ಮರ, ರೆಂಬೆಗಳು ಬಿದ್ದ ಬಗ್ಗೆ ದೂರುಗಳು ಬಂದ ಕೂಡಲೇ, ಆಯಾ ವಲಯದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಆನಂತರ ಅಧಿಕಾರಿಗಳು ಸ್ಥಳಕ್ಕೆ ಮರ ಕಟಾವು ತಂಡಗಳನ್ನು ಕಳುಹಿಸಿ ಧರೆಗುರುಳಿದ ಮರಗಳನ್ನು ಕಟಾವು ಮಾಡಿ ನಾಗರಿಕರು/ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ.

ADVERTISEMENT

39 ಮರ ಕಟಾವು ತಂಡ: ಪಾಲಿಕೆ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ಮರ ಕಟಾವು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ತುರ್ತಾಗಿ ಮರಗಳನ್ನು ತೆರವುಗೊಳಿಸಲು ಹೆಚ್ಚುವರಿಯಾಗಿ 11 ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಪ್ರತಿ ತಂಡದಲ್ಲೂ ಏಳು ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಇದ್ದಾರೆ. ಮರ, ರೆಂಬೆ ತೆರವಿಗೆ ಅಗತ್ಯವಿರುವ ಪರಿಕರಗಳು, ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

5 ಬೈಕ್ ತಂಡ: ಬಿದ್ದ ಮರಗಳ ತೆರವಿಗೆ ಈ ಬಾರಿ 5 ಬೈಕ್ (ದ್ವಿಚಕ್ರ ತಂಡ) ತಂಡಗಳನ್ನು ನಿಯೋಜಿಸಿಕೊಳ್ಳಲಾಗಿದೆ. ತುರ್ತಾಗಿ ಮರಗಳನ್ನು ತೆಗೆಯಬೇಕಾದ ಸ್ಥಳಗಳಿಗೆ ಬೈಕ್ ತಂಡಗಳು ತೆರಳಿ ಕಾರ್ಯನಿರ್ವಹಿಸಲಿವೆ.

ಅಲ್ಲದೆ, ತ್ವರಿತಗತಿಯಲ್ಲಿ ತೆರವುಗೊಳಿಸಲು ಪಾಲಿಕೆಯ ಅರಣ್ಯ ವಿಭಾಗವು 2 ಕ್ರೇನ್, 2 ಜೆಸಿಬಿಗಳು, ಮರಗಳ ಸಾಗಣೆಗೆ 8 ಟ್ರ್ಯಾಕ್ಟರ್‌ಗಳನ್ನು ಸಜ್ಜಾಗಿರಿಸಲಾಗಿದೆ. ತೆರವುಗೊಳಿಸಿದ ದಿಮ್ಮಿಗಳು, ರೆಂಬೆ, ಕೊಂಬೆಗಳ ವಿಲೇವಾರಿಗಾಗಿ ವಲಯಾವಾರು ಒಂಟು 8 ಡಂಪಿಂಗ್ ಯಾರ್ಡ್‌ ಇವೆ. ಅಲ್ಲದೆ, ಹೆಚ್ಚುವರಿಯಾಗಿ ತಾತ್ಕಾಲಿಕವಾಗಿ 6 ಕಡೆ ಡಂಪಿಂಗ್ ಯಾರ್ಡ್‌ ಗುರುತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಧರೆಗುರುಳಿದ ಮರಗಳನ್ನು ಕಟಾವು ಮಾಡಲು ಶೀಘ್ರವಾಗಿ ಸ್ಥಳಕ್ಕೆ ತಲುಪಲು ನಿಯೋಜನೆಗೊಂಡಿರುವ ‘ಬೈಕ್‌ ತಂಡ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.