ಬೆಂಗಳೂರು: ನಗರದಲ್ಲಿ 279 ಅನಧಿಕೃತ ಬಡಾವಣೆಗಳಿರುವುದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗುರುತಿಸಿ ತಿಂಗಳು ಕಳೆದರೂ, ‘ರಾಜಕೀಯ ಪ್ರಭಾವ’ದಿಂದ ಅವುಗಳ ತೆರವು ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ.
ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರಕಾರ (ಆರ್‌ಎಂಪಿ–2015), ಭೂ ಉಪಯೋಗದ ಉದ್ದೇಶವನ್ನು ‘ಬಡಾವಣೆ ನಿರ್ಮಾಣ’ ಎಂದು ಪರಿವರ್ತನೆ ಮಾಡಿಸಿಕೊಳ್ಳದೆ ಬೃಹತ್ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದೆ.
ಒಟ್ಟಾರೆ ಈ ಬಡಾವಣೆಗಳಲ್ಲಿ ಸುಮಾರು 27 ಸಾವಿರಕ್ಕೂ ಹೆಚ್ಚು ನಿವೇಶನಗಳಿವೆ ಎಂದು ಅಂದಾಜಿಸಲಾಗಿದೆ. ಕಾಂಕ್ರೀಟ್ ರಸ್ತೆ, ಚರಂಡಿ, ವಿದ್ಯುತ್ ಕಂಬ, ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಣ್ಣಿನ ರಸ್ತೆ, ಡಾಂಬರು ರಸ್ತೆ, ಜಲ್ಲಿ ಕಲ್ಲು ರಸ್ತೆಗಳನ್ನೂ ನಿರ್ಮಿಸಲಾಗಿದೆ.
ಈ ಬಡಾವಣೆಗಳು ನಿರ್ಮಾಣವಾಗಿರುವ ಪ್ರದೇಶವನ್ನು ‘ಆರ್‌ಎಂಪಿ–2015ರಲ್ಲಿನ ಭೂ ಉಪಯೋಗ ಉದ್ದೇಶ’ದಲ್ಲಿ ವ್ಯವಸಾಯ, ಕೈಗಾರಿಕೆ, ಸಾರಿಗೆ –ಸಂಪರ್ಕ, ವಾಣಿಜ್ಯ, ಕಣಿವೆ ಬಫರ್ ಝೋನ್, ಅರಣ್ಯ ವಲಯ ಎಂದು ನಮೂದಾಗಿದೆ.
‘ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸಿ, ಅನಧಿಕೃತ ಬಡಾವಣೆಗಳನ್ನು ಗುರುತಿಸಿದ್ದಾರೆ. ಯಾವ ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್‌ಗಳಲ್ಲಿ ಈ ಅನಧಿಕೃತ ಬಡಾವಣೆಗಳು ನಿರ್ಮಾಣವಾಗುತ್ತಿವೆ ಎಂಬುದನ್ನು ದಾಖಲೆ ಸಹಿತ ವರದಿಯನ್ನು ಸಿದ್ಧಪಡಿಸಿದ್ದಾರೆ. ಇವುಗಳನ್ನು ತೆರವು ಮಾಡಲು ಎಂಜಿನಿಯರಿಂಗ್ ವಿಭಾಗಕ್ಕೆ ಕಡತ ಸಲ್ಲಿಸಿ ಒಂದು ತಿಂಗಳಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಸೂಕ್ತ ಶುಲ್ಕ ಪಾವತಿಸಿ, ಕ್ರಮಬದ್ಧವಾಗಿ ಆರ್‌ಎಂಪಿ–2015ರಲ್ಲಿರುವ ಭೂ ಬಳಕೆ ಉದ್ದೇಶವನ್ನು ಬದಲಿಸಿಕೊಳ್ಳಲು ಅವಕಾಶವಿದೆ. ಇದರ ಸಂಪೂರ್ಣ ಉಲ್ಲಂಘನೆಯಾಗಿದೆ. ಇಂತಹ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಈ ಬಡಾವಣೆಗಳಲ್ಲಿರುವ ರಸ್ತೆ, ಒಳಚರಂಡಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ತೆರವು ಮಾಡಬಹುದು. ಲಕ್ಷಾಂತರ ರೂಪಾಯಿ ನೀಡಿ ಅನಧಿಕೃತ ಬಡಾವಣೆಯಲ್ಲಿ ನಾಗರಿಕರು ನಿವೇಶನ ಖರೀದಿಸುವುದನ್ನು ತಪ್ಪಿಸಬಹುದು’ ಎಂದರು.
ಪೂರ್ವ ತಾಲ್ಲೂಕು
ಬಿದರಹಳ್ಳಿ ಹೋಬಳಿ: ಯರಪ್ಪನಹಳ್ಳಿ, ಕಾಡ ಅಗ್ರಹಾರ, ಬಂಡೆ ಬೊಮ್ಮಸಂದ್ರ, ಅಣಗಲಪುರ, ವಡೇರಹಳ್ಳಿ, ರಾಂಪುರ, ಆದೂರು, ಬಿದರಹಳ್ಳಿ, ಬೈಯಪ್ಪನಹಳ್ಳಿ, ದೊಡ್ಡೇನಹಳ್ಳಿ, ನಾಡಗೌಡಗೊಲ್ಲಹಳ್ಳಿ, ಚಿಕ್ಕಗುಬ್ಬಿ, ಹೂವಿನಣೆ, ಕಾಡುಸೊಣ್ಣಪ್ಪನಹಳ್ಳಿ, ಮಿಟ್ಟಗಾನಹಳ್ಳಿ, ಬೆಳತ್ತೂರು, ಬಿದರೆ ಅಗ್ರಹಾರ, ದೊಡ್ಡಬನಹಳ್ಳಿ, ಕಾಡುಗೋಡಿ, ಕುಂಬೇನ ಅಗ್ರಹಾರ, ಕುರುಡುಸೊಣ್ಣೇನಹಳ್ಳಿ, ಶೀಗೇಹಳ್ಳಿ.
ಕೆ.ಆರ್. ಪುರ ಹೋಬಳಿ: ಬಸವನಪುರ, ದ್ಯಾವಸಂದ್ರ, ಕೊಡಿಗೇಹಳ್ಳಿ, ಸಾದರಮಂಗಲ, ವಿಭೂತಿಪುರ,
ವರ್ತೂರು ಹೋಬಳಿ: ಬಳಗೆರೆ, ಗುಂಜೂರು, ಕಾಚಮಾರನಹಳ್ಳಿ, ಮುಳ್ಳೂರು, ಸೂಲಕುಂಟೆ, ಹಾಲನಾಯಕನಹಳ್ಳಿ,
ಯಲಹಂಕ ತಾಲ್ಲೂಕು
ಯಲಹಂಕ ಹೋಬಳಿ: ಶಿವನಹಳ್ಳಿ. ಘಂಟಿಗಾನಹಳ್ಳಿ, ಲಕ್ಷ್ಮೀಸಾಗರ, ನಾಗದಾಸನಹಳ್ಳಿ, ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ಮುದ್ದನಹಳ್ಳಿ.
ಜಾಲ ಹೋಬಳಿ: ಸಾತನೂರು, ಬೈಯಪ್ಪನಹಳ್ಳಿ, ಚಾಗಲಟ್ಟಿ, ಕಟ್ಟಿಗೇನಹಳ್ಳಿ, ಕೋಗಿಲು, ಬಾಗಲೂರು, ಬಿ.ಕೆ. ಹಳ್ಳಿ, ಮಾರೇನಹಳ್ಳಿ, ಬೆಟ್ಟಹಲಸೂರು, ಹುಣಸಮಾರನಹಳ್ಳಿ, ನೆಲ್ಲುಕುಂಟೆ.
ದಕ್ಷಿಣ ತಾಲ್ಲೂಕು
ಉತ್ತರಹಳ್ಳಿ ಹೋಬಳಿ: ಕೆ. ಗೊಲ್ಲಹಳ್ಳಿ.
ಕೆಂಗೇರಿ ಹೋಬಳಿ: ಗುಡಿಮಾವು, ದೇವಗೆರೆ, ಕುಂಬಳಗೋಡು, ಕಂಬೀಪುರ, ಅಗರ.
ಬೇಗೂರು ಹೋಬಳಿ: ಹೊಮ್ಮದೇವನಹಳ್ಳಿ, ವಿಟ್ಟಸಂದ್ರ, ಬೇಗೂರು, ಮಲ್ಲಸಂದ್ರ.
ಆನೇಕಲ್ ತಾಲ್ಲೂಕು
ಜಿಗಣಿ ಹೋಬಳಿ: ಹುಲ್ಲಹಳ್ಳಿ, ಹುಲಿಮಂಗಲ, ಬಿಲ್ವಾರದಹಳ್ಳಿ, ಕಲ್ಕೆರೆ, ಮಂಟಪ, ಬೇಗಿಹಳ್ಳಿ, ಹಳೆ ಸಂಪಿಗೆಹಳ್ಳಿ, ಮಲ್ಲಸಂದ್ರ.
ಸರ್ಜಾಪುರ ಹೋಬಳಿ: ಚಿಕ್ಕೇನೆಕ್ಕುಂದಿ, ಹಲಸಹಳ್ಳಿ ತಿಪ್ಪಸಂದ್ರ, ಹೆಗ್ಗೊಂಡನಹಳ್ಳಿ, ಕತ್ರಿಗುಪ್ಪೆ, ರಾಮನಾಯಕನಹಳ್ಳಿ, ತಿಗಳಚೌಡೇದೇನಹಳ್ಳಿ, ಶ್ರೀರಾಮಪುರ, ಚಿಕ್ಕನಾಗಮಂಗಲ, ಗಟ್ಟಹಳ್ಳಿ, ಗೂಳಿಮಂಗಲ, ಸಿಂಗೇನ ಅಗ್ರಹಾರ, ಆವಲಹಳ್ಳಿ, ಕೊಡತಿ, ದೊಮ್ಮಸಂದ್ರ, ಸೂಲಿಕುಂಟೆ, ಹುಸ್ಕೂರು, ಕಗ್ಗಲೀಪುರ, ಕೊಮ್ಮಸಂದ್ರ, ರಾಯಸಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.