ADVERTISEMENT

28ರಿಂದ ರಂಗಶಂಕರ ನಾಟಕೋತ್ಸವ

ಶಂಕರ್‌ನಾಗ್‌ 60ನೇ ಹುಟ್ಟುಹಬ್ಬ; ರಂಗಮಂದಿರದ ದಶಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2014, 19:35 IST
Last Updated 12 ಅಕ್ಟೋಬರ್ 2014, 19:35 IST

ಬೆಂಗಳೂರು: ‘ರಂಗಶಂಕರ ರಂಗ ಮಂದಿ­ರದ  ದಶಮಾನೋತ್ಸವ  ಮತ್ತು ಶಂಕರ್‌ನಾಗ್ ಅವರ ೬೦ನೇ ಹುಟ್ಟುಹಬ್ಬದ ನಿಮಿತ್ತ ರಂಗ ಶಂಕರ­­ದಲ್ಲಿ ಇದೇ 28ರಿಂದ ನವೆಂಬರ್‌ 9ರ ವರೆಗೆ ನಾಟಕೋತ್ಸವ ಹಮ್ಮಿಕೊಳ್ಳ­ಲಾಗಿದೆ’ ಎಂದು ರಂಗಕರ್ಮಿ ಅರುಂಧತಿ ನಾಗ್‌ ತಿಳಿಸಿದರು.

ಜೆ.ಪಿ.ನಗರ ಎರಡನೇ ಹಂತದಲ್ಲಿರುವ ರಂಗಶಂಕರದಲ್ಲಿ ನಡೆದ ನಾಟ­ಕೋ­ತ್ಸವದ ಅಧಿಕೃತ ಪ್ರಕಟಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ನಗರದಲ್ಲಿ ರಂಗಮಂದಿರವನ್ನು ಕಟ್ಟಬೇಕೆಂಬ ಶಂಕರ್‌ನಾಗ್‌ ಕನಸು ಅವರು ಗತಿಸಿದ ಸುಮಾರು 15 ವರ್ಷಗಳ ತರುವಾಯ ನನಸಾಯಿತು. ಹಲವರ ಸಹಾಯ, ಸಹಕಾರದೊಂ­ದಿಗೆ  ತುಂಬ ಕಷ್ಟಪಟ್ಟು ರಂಗ ಶಂಕರ ಕಟ್ಟಲಾಯಿತು. ಕಳೆದ 10 ವರ್ಷದಲ್ಲಿ ಈ ರಂಗ ಮಂದಿರದಲ್ಲಿ 32 ಭಾಷೆ­ಗಳಿಗೆ ಸೇರಿದ 4000ಕ್ಕೂ ಅಧಿಕ ನಾಟಕ­ಗಳನ್ನು ಎಂಟು ಲಕ್ಷಕ್ಕೂ ಹೆಚ್ಚಿನ  ಪ್ರೇಕ್ಷಕರು ನೋಡಿದ್ದಾರೆ’ ಎಂದು ತಿಳಿಸಿದರು.

‘ಈ ನಾಟಕೋತ್ಸವದಲ್ಲಿ ದೇಶದ ವಿವಿಧ ನಗರಗಳಿಂದ ಬರುವ ನಾಟಕ ತಂಡಗಳು ಶಂಕರ್‌ನಾಗ್‌ ಅವರ 60ನೇ ಹುಟ್ಟುಹಬ್ಬದ ದಿನ­ವಾದ ನವೆಂಬರ್‌ 9ರ ವರೆಗೆ 13 ನಾಟಕ­ಗಳ 20 ಪ್ರದರ್ಶನಗಳನ್ನು ನೀಡ­ಲಿವೆ. ಕೊನೆಯ ದಿನ ಇದೇ ಮೊದಲ ಬಾರಿಗೆ ಶಂಕರ್‌ನಾಗ್‌ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು ಯುವ ರಂಗಕರ್ಮಿ­ಯೊಬ್ಬರಿಗೆ ಪ್ರದಾನ ಮಾಡಲಾಗು­ವುದು’ ಎಂದರು.

ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಮಾತನಾಡಿ, ‘ರಂಗಮಂದಿರ ಕಟ್ಟು­ತ್ತೇನೆ ಎಂಬ ಅರುಂಧತಿ ಮಾತನ್ನು ನಾನು ನಂಬಿರಲಿಲ್ಲ. ರಂಗಮಂದಿರದ ಉದ್ಘಾಟನೆಗೆ ಬಂದಾಗ ಈ ಅದ್ಭುತ ಸಾಧನೆ ಕಂಡು ಆಶ್ಚರ್ಯಪಟ್ಟಿದ್ದೆ. ಇದು ಕನ್ನಡ ರಂಗಭೂಮಿಗೆ ಕೊಟ್ಟ ದೊಡ್ಡ ಕೊಡುಗೆ. ಈ ಸಾಂಸ್ಕೃತಿಕ ಕೇಂದ್ರದ ಸ್ಫುರಣೆಯಿಂದ ನಾನು ಅರುಂಧತಿಗಾಗಿ ‘ಒಡಕಲು ಬಿಂಬ’ ನಾಟಕ ರಚಿಸಿದೆ’ ಎಂದು ಹೇಳಿದರು.

ನಾಟಕೋತ್ಸವದ ಟಿಕೆಟ್‌ ಬಿಡುಗಡೆ­ಗೊಳಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು, ‘ರಂಗ ಶಂಕರ ಕಟ್ಟುವ ಜತೆಗೆ ನಟಿಯಾಗಿ, ಸಂಘಟಕಿಯಾಗಿ, ರಂಗ ತಜ್ಞೆ­­ಯಾಗಿ ಅರುಂಧತಿ ಅವರು ರಂಗ­ಭೂಮಿಯಲ್ಲಿ ದೊಡ್ಡ ಸಾಧನೆ ಮಾಡಿ­ದ್ದಾರೆ. ರಂಗಶಂಕರಕ್ಕೆ ಈ ಸಾಲಿನಿಂದ ಇಲಾಖೆಯ ವತಿಯಿಂದ ನಿರಂತರ­ವಾಗಿ ಅನುದಾನ ನೀಡಲು ಕ್ರಮ ಕೈ­ಗೊಳ್ಳ­ಲಾಗುವುದು’ ಎಂದು ಹೇಳಿದರು.

ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ, ಹಿರಿಯ ಕಲಾವಿದ ಎಸ್‌.ಜಿ.ವಾಸುದೇವ್, ಲೇಖಕಿ ವಿಜಯಾ, ಚಿತ್ರಕಲಾ ಪರಿಷತ್ ಕಾರ್ಯದರ್ಶಿ ಡಿ.ಕೆ.ಚೌಟ ಮತ್ತಿತರರು ಉಪಸ್ಥಿತರಿದ್ದರು.

ಬಡವಾದ ಕನ್ನಡ ನಾಟಕ ಕ್ಷೇತ್ರ
ಕಾರ್ಯಕ್ರಮ ಉದ್ಘಾಟಿಸಿದ ನಿಘಂಟು ತಜ್ಞ ಪ್ರೊ.ಜಿ.ವೆಂಕಟ ಸುಬ್ಬಯ್ಯ  ಅವರು ಮಾತನಾಡಿ, ‘ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರ ತುಂಬ ಬಡವಾಗಿದೆ. ಕನ್ನಡದಲ್ಲಿ ನಾಟಕಗಳೇ ಬರುತ್ತಿಲ್ಲ. ಇನ್ನು ಮುಂದಾದರೂ ಕನ್ನಡ ಲೇಖಕರು ನಾಟಕಗಳನ್ನು ಬರೆಯಬೇಕು. ಯುವಕರು ಬೇರೆ ಭಾಷೆ ನಾಟಕವಾದರೂ ಸರಿ ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ನಾಟಕ ಕ್ಷೇತ್ರವನ್ನು ಸಮೃದ್ಧಗೊಳಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.