ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ 19 ಚಿಕಿತ್ಸೆ ಸಲುವಾಗಿ 28 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಸನ್ನದ್ಧ ಸ್ಥಿತಿಯಲ್ಲಿಟ್ಟಿದ್ದೇವೆ. ಚಿಕಿತ್ಸೆಗೆ ಈಗಾಗಲೇ ಎರಡು ಸರ್ಕಾರಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ 50 ಹಾಸಿಗೆಗಳು ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 750ಕ್ಕೂ ಹೆಚ್ಚು ಹಾಸಿಗೆಗಳ ಸೌಲಭ್ಯ ಇದೆ. 13 ಸಾವಿರ ವೆಂಟಿಲೇಟರ್‌ಗಳು ಲಭ್ಯ ಇವೆ’ ಎಂದು ಮೇಯರ್ ಎಂ.ಗೌತಮ್ ಕುಮಾರ್ ತಿಳಿಸಿದರು.
ದೇಶದಲ್ಲಿ ಬಿಜೆಪಿ ಆಡಳಿತವಿರುವ ಮಹಾನಗರಗಳಲ್ಲಿ ಕೋವಿಡ್-19 ಸೋಂಕು ಹತ್ತಿಕ್ಕಲು ಕೈಗೊಂಡ ಕ್ರಮಗಳ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಸಂಘಟನೆಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಬುಧವಾರ ಮಾಹಿತಿ ಪಡೆದರು.
‘ನಗರದಲ್ಲಿ 10 ಮಂದಿ ಐಎಎಸ್ 12 ಕೆಎಎಸ್ ಅಧಿಕಾರಿಗಳು ಸೇರಿದಂತೆ 1,643 ಸಿಬ್ಬಂದಿ ತಂಡಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ’ ಎಂದು ಗೌತಮ್ ಕುಮಾರ್ ಮಾಹಿತಿ ನೀಡಿದರು.
‘ಬಿಬಿಎಂಪಿ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಜನರ ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಅಳೆದು ರೋಗ ಬಾರದಂತೆ ಮುಂಜಾಗ್ರತೆ ವಹಿಸುವ ಕುರಿತು ‘ಪ್ರಾಣವಾಯು’ ಎಂಬ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ಪ್ರತಿ ಮನೆಯವರ ರಕ್ತದ ಆಮ್ಲಜನಕ ಪ್ರಮಾಣವನ್ನು ಆಕ್ಸಿಮೀಟರ್ ಮೂಲಕ ಕಂಡುಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
’ನಗರದಾದ್ಯಂತ ಸೋಂಕು ನಿವಾರಣಾ ದ್ರಾವಣ ಸಿಂಪಡಿಸಲು 40 ವಾಹನಗಳನ್ನು ಸನ್ನದ್ಧವಾಗಿಟ್ಟುಕೊಂಡಿದ್ದೇವೆ. 60 ವರ್ಷ ಮೇಲ್ಪಟ್ಟವರು ಹಾಗೂ ಶೀತ ಜ್ವರದ ಲಕ್ಷಣ ಇರುವವರನ್ನು ಗುರುತಿಸಿ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವ ಉದ್ದೇಶದಿಂದ ಸಮಗ್ರ ಆರೋಗ್ಯ ಸಮೀಕ್ಷೆಯನ್ನೂ ಆರಂಭಿಸಿದ್ದೇವೆ’ ಎಂದು ವಿವರಿಸಿದರು.
‘ಕೋವಿಡ್ 19 ರೋಗ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕಮಾಂಡ್ ಕಂಟ್ರೋಲ್ ವ್ಯವಸ್ಥೆ ಮೂಲಕ ದಿನವಿಡೀ ತಕ್ಷಣವೇ ಪಡೆಯುವ ಸೌಕರ್ಯ ಅಳವಡಿಸಿಕೊಂಡಿದ್ದೇವೆ. ಈ ಸಲುವಾಗಿ ವಾರ್‌ರೂಂ ಆರಂಭಿಸಿದ್ದೇವೆ’ ಎಂದು ವಿವರಿಸಿದರು.
‘ಕೊರೊನಾ ಹಬ್ಬುವಿಕೆ ಆರಂಭವಾದ ಬಳಿಕ 22 ಸಾವಿರ ಅಂತರರಾಷ್ಟ್ರೀಯ ಪ್ರಯಾಣಿಕರು ನಗರಕ್ಕೆ ಬಂದಿದ್ದರು. ಅವರ ಕೈಗೆ ಮುದ್ರೆ ಹಾಕಿ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಮಾಡಿದ್ದೆವು. ಇದರಿಂದಾಗಿ ನಗರದಲ್ಲಿ ರೋಗವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು’ ಎಂದರು.
‘ಈಗ ಬರುತ್ತಿರುವ ಅಂತರರಾಷ್ಟ್ರೀಯ ಪ್ರಯಾಣಿಕರ ನಿರ್ವಹಣೆಗಾಗಿಯೇ ಒಬ್ಬರು ಹಿರಿಯ ಐಎಎಸ್ ಅಧಿಕಾರಿಯನ್ನು ನಿಯೋಜಿಸಲಾಗಿದೆ. ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಸಲುವಾಗಿಯೇ ಪ್ರತ್ಯೇಕ ಕೌಂಟರ್ ಆರಂಭಿಸಿದ್ದೇವೆ. ಅವರ ಪ್ರತ್ಯೇಕ ವಾಸಕ್ಕೆ ಪಂಚಾತಾರ, ತ್ರಿತಾರಾ ಹಾಗೂ ಸಾಮಾನ್ಯ ಹೋಟೆಲ್‌ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಪಾವತಿ ಮಾಡಲು ಶಕ್ತರದಲ್ಲದವರು ಉಳಿದುಕೊಳ್ಳುವುದಕ್ಕೆ ಹಾಸ್ಟೆಲ್‌ಗಳು, ಕಲ್ಯಾಣಮಂಟಪಗಳು, ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಿದ್ದೇವೆ’ ಎಂದರು.
ಉಪಮೇಯರ್ ರಾಮಮೋಹನರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.