ಬೆಂಗಳೂರು: ರಾಜ್ಯದ 10 ಮಹಾನಗರ ಪಾಲಿಕೆಗಳು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 300 ಪೌರ ಕಾರ್ಮಿಕರಿಗೆ ಈ ವರ್ಷ ವಿದೇಶ ಪ್ರವಾಸದ ಭಾಗ್ಯ ಲಭಿಸಿದೆ.
35 ಮಂದಿ ಪೌರ ಕಾರ್ಮಿಕರನ್ನು ಒಳಗೊಂಡ ಮೊದಲ ತಂಡವು ಸಿಂಗಪುರಕ್ಕೆ ತೆರಳಿದ್ದು, ಸದ್ಯದಲ್ಲೇ ಈ ತಂಡವು ಅಧ್ಯಯನ ಪೂರ್ಣಗೊಳಿಸಿ ರಾಜ್ಯಕ್ಕೆ ವಾಪಸ್ಸಾಗಲಿದೆ. ಎರಡನೇ ತಂಡದ 40 ಮಂದಿಗೆ ವೀಸಾ ಸಿದ್ಧವಾಗಿದ್ದು, ಮಾರ್ಚ್ 18ರಂದು ಬೆಂಗಳೂರು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಿಂಗಪುರಕ್ಕೆ ತೆರಳಲಿದೆ.
ಸಮಾಜ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಈ ಪ್ರವಾಸದ ಸುಯೋಗವು ಕಾರ್ಮಿಕರಿಗೆ ಒದಗಿಬಂದಿದೆ.
ಸಿಂಗಪುರದಲ್ಲಿ ಮ್ಯಾನ್‌ಹೋಲ್ ಸ್ವಚ್ಛತೆಗೆ ಸಂಬಂಧಿಸಿದಂತೆ ನವೀಕೃತ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಜತೆಗೆ, ಸ್ವಚ್ಛತಾ ಪ್ರಕ್ರಿಯೆ, ವೈಜ್ಞಾನಿಕ ಕಸ ವಿಲೇವಾರಿ, ಒಳಚರಂಡಿ ಸ್ವಚ್ಛತೆಯೂ ಆ ದೇಶದಲ್ಲಿ ಉತ್ತಮವಾಗಿದೆ. ಅಲ್ಲಿನ ಕಾರ್ಮಿಕರು ಸ್ವಚ್ಛತಾ ಕೆಲಸಕ್ಕೆ ಆಧುನಿಕ ಪರಿಕರಗಳ ಮೊರೆ ಹೋಗಿದ್ದಾರೆ. ಅದೇ ಮಾದರಿಯನ್ನು ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲೂ ಅಳವಡಿಸಿಕೊಳ್ಳಲು ಅಧ್ಯಯನ ಪ್ರವಾಸ ಮಹತ್ವದ್ದಾಗಿದೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.
‘ಬಿಬಿಎಂಪಿಯ 198 ವಾರ್ಡ್‌ಗಳಿಂದ 200 ಪೌರ ಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ. ಶಿವಮೊಗ್ಗ, ತುಮಕೂರು, ಮೈಸೂರು, ಹುಬ್ಬಳ್ಳಿ – ಧಾರವಾಡ, ದಾವಣಗೆರೆ, ಬಳ್ಳಾರಿ, ವಿಜಯಪುರ, ಕಲಬುರಗಿ, ಬೆಳಗಾವಿ, ಮಂಗಳೂರು ಪಾಲಿಕೆಯ ತಲಾ 10 ರಂತೆ ಒಟ್ಟು 100 ಮಂದಿ ಆಯ್ಕೆಯಾಗಿದ್ದಾರೆ. ಒಂದೇ ತಂಡವಾಗಿ ಕಳುಹಿಸಲು ಸಾಧ್ಯವಾಗದ ಕಾರಣಕ್ಕೆ ಪ್ರತ್ಯೇಕವಾಗಿ ಅಧ್ಯಯನಕ್ಕೆ ಕಳುಹಿಸಲಾಗುತ್ತಿದೆ’ ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಮಲ್ಲಿಕಾರ್ಜುನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತಿ ತಂಡವು ಸಿಂಗಪುರದಲ್ಲಿ ಮೂರು ದಿನ ವಾಸ್ತವ್ಯ ಮಾಡಲಿದೆ. ಮಾರ್ಗದರ್ಶನ ಮಾಡಲು ತಂಡದೊಂದಿಗೆ ನಿಗಮದ ಇಬ್ಬರು ಅಧಿಕಾರಿಗಳೂ ತೆರಳುತ್ತಾರೆ. ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ಗೆ (ಎಂಎಸ್‌ಐಎಲ್) ಉಸ್ತುವಾರಿ ನೀಡಲಾಗಿದೆ. ಏಪ್ರಿಲ್ ಅಂತ್ಯದ ವೇಳೆಗೆ ಈ ಪ್ರವಾಸ ಪೂರ್ಣವಾಗಲಿದೆ. ಅಧ್ಯಯನ ಪ್ರವಾಸದ ಅನುಭವ ಆಧರಿಸಿ ಪಾಲಿಕೆಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ, ನೀರು ಶುದ್ಧೀಕರಣ, ಸ್ವಚ್ಛತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಬಗೆಹರಿಸಲು ಸಾಧ್ಯವಾಗಲಿದೆ’ ಎಂದೂ ಹೇಳಿದರು.
***
ಪೌರ ಕಾರ್ಮಿಕರ ವಿದೇಶ ಪ್ರವಾಸಕ್ಕೆ ಒಟ್ಟು ₹ 5 ಕೋಟಿ ವೆಚ್ಚವಾಗಲಿದೆ. ಒಬ್ಬರಿಗೆ ₹ 1.6 ಲಕ್ಷ ಖರ್ಚಾಗುತ್ತಿದೆ.
–ಕೆ.ಬಿ.ಮಲ್ಲಿಕಾರ್ಜುನ್, ಎಂಡಿ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.