ಬೆಂಗಳೂರು: ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹ 329 ಕೋಟಿ ವೆಚ್ಚದಲ್ಲಿ 17 ಅಗ್ನಿಶಾಮಕ ಠಾಣೆಗಳನ್ನು ಆರಂಭಿಸುವುದೂ ಸೇರಿದಂತೆ ಅಗ್ನಿಶಾಮಕ ದಳದ ಬಲವರ್ಧನೆಗೆ ಗೃಹ ಇಲಾಖೆಯು ಕಂದಾಯ ಇಲಾಖೆಗೆ ಸೋಮವಾರ ಕ್ರಿಯಾಯೋಜನೆ ಸಲ್ಲಿಸಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಗ್ನಿಶಾಮಕ ದಳದ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅವರು ಕ್ರಿಯಾಯೋಜನೆಯನ್ನು ಮಂಡಿಸಿದರು. ಕಂದಾಯ ಇಲಾಖೆಯ ಅನುಮೋದನೆ ಬಳಿಕ ಪ್ರಸ್ತಾವವೂ ಕೇಂದ್ರ ಗೃಹ ಸಚಿವಾಲಯಕ್ಕೆ ರವಾನೆಯಾಗಲಿದೆ.
ಅಗ್ನಿಶಾಮಕ ಠಾಣೆಗಳ ಕಟ್ಟಡಗಳ ನಿರ್ಮಾಣಕ್ಕೆ ₹ 98.97 ಕೋಟಿ, ರಾಜ್ಯ ತರಬೇತಿ ಕೇಂದ್ರದ ಉನ್ನತೀಕರಣಕ್ಕೆ ₹ 16.49 ಕೋಟಿ, ಆಧುನಿಕ ಉಪಕರಣಗಳ ಖರೀದಿಗೆ ₹ 148.45 ಕೋಟಿ ಮತ್ತು ನಗರ ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ಬಲಪಡಿಸಲು ₹ 16.50 ಕೋಟಿ ವೆಚ್ಚದ ಪ್ರಸ್ತಾವ ಕ್ರಿಯಾಯೋಜನೆಯಲ್ಲಿದೆ.
‘ಕೇಂದ್ರ ಸರ್ಕಾರವು ಒದಗಿಸಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಯೋಜನೆ ರೂಪಿಸಿದೆ. ಅಗ್ನಿ ಅವಘಡಗಳನ್ನು ತಡೆಯುವಲ್ಲಿ ಈ ಯೋಜನೆಯು ಸಹಕಾರಿಯಾಗಲಿದೆ. ಅಗ್ನಿಶಾಮಕ ಠಾಣೆಗಳಿಗೆ ಅತ್ಯಾಧುನಿಕ ಯಂತ್ರೋಪಕರಣಗಳ ಅಗತ್ಯವಿದ್ದರೆ ಖರೀದಿಗೆ ಸರ್ಕಾರವು ಅನುದಾನ ಒದಗಿಸಲಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್, ಅಗ್ನಿ ಶಾಮಕದಳ ಡಿಐಜಿ ರವಿ ಡಿ. ಚನ್ನಣ್ಣನವರ್ ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.