ಬೆಂಗಳೂರು: ಅಭಿವೃದ್ಧಿಯಾಗುತ್ತಿರುವ ಮತ್ತು ಇನ್ನೂ ಅಭಿವೃದ್ಧಿಯಾಗಬೇಕಿರುವ ಕೆರೆಗಳ ವಾರ್ಷಿಕ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲು ಬಿಬಿಎಂಪಿ ಮುಂದಾಗಿದೆ.
ಕೆರೆಗಳು ಅಭಿವೃದ್ಧಿಯಾದ ಮೇಲೆ ಅವುಗಳ ಒಂದು ಅಥವಾ ಮೂರು ವರ್ಷದ ನಿರ್ವಹಣೆ ಗುತ್ತಿಗೆದಾರರದ್ದೇ ಆಗಿರುತ್ತದೆ. ಆದರೆ, ಅಂತಹ ಕೆರೆಗಳಿಗೂ ವಾರ್ಷಿಕ ನಿರ್ವಹಣೆಗೆ ಹಣ ವೆಚ್ಚ ಮಾಡಲಾಗುತ್ತಿದೆ.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಮೈಲಸಂದ್ರ (ಸುಣ್ಣಕಲ್ಲು ಪಾಳ್ಯ), ದಾಸರಹಳ್ಳಿ ವಲಯದ ನೆಲಗದರನಹಳ್ಳಿ ಕೆರೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಈ ಕೆರೆಗಳಿಗೆ ವಾರ್ಷಿಕ ನಿರ್ವಹಣೆಗೆ ಕ್ರಮವಾಗಿ ₹22.58 ಲಕ್ಷ ಹಾಗೂ ₹21 ಲಕ್ಷ ವೆಚ್ಚ ಮಾಡಲು ಟೆಂಡರ್ ಆಹ್ವಾನಿಸಲಾಗಿದೆ.
ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿರುವ ರಾಜರಾಜೇಶ್ವರಿನಗರ ವಲಯದ ಲಿಂಗಧೀರನಹಳ್ಳಿ (₹31.97 ಲಕ್ಷ), ಪೂರ್ವ ವಲಯದ ಕಾಚರಕನಹಳ್ಳಿ (₹46 ಲಕ್ಷ), ದಾಸರಹಳ್ಳಿ ವಲಯದ ದೊಡ್ಡಬಿದರ
ಕಲ್ಲು (₹21 ಲಕ್ಷ), ಯಲಹಂಕ ವಲಯದ ಅಮೃತಹಳ್ಳಿ ಕೆರೆಗಳ (₹13 ಲಕ್ಷ) ನಿರ್ವಹಣೆಗೂ ವೆಚ್ಚ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ವೆಚ್ಚಕ್ಕೆಲ್ಲ ಬಜೆಟ್ ಅನುಮೋದನೆಯ ಕೋಡ್ (3028) ಕೂಡ ಲಭ್ಯವಾಗಿದೆ.
ಅಭಿವೃದ್ಧಿಯಾಗಿರುವ, ಅಭಿವೃದ್ಧಿ– ಟೆಂಡರ್ ಹಂತದಲ್ಲಿರುವ, ಅಭಿವೃದ್ಧಿ ಕೈಗೊಳ್ಳಬೇಕಿರುವ 174 ಕೆರೆಗಳ ವಾರ್ಷಿಕ ನಿರ್ವಹಣೆ ಹಾಗೂ ಕೆರೆಗಳ ನಿರ್ವಹಣೆಯನ್ನು ನಿಗಾವಹಿಸುವ ಆ್ಯಪ್ ಅಭಿವೃದ್ಧಿಗೆ ಬಿಬಿಎಂಪಿ ₹35 ಕೋಟಿಯನ್ನು 2023–24ನೇ ಸಾಲಿನಲ್ಲಿ ವೆಚ್ಚ ಮಾಡಲಿದೆ.
‘ಕೆರೆಗಳ ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಬಿಎಂಪಿ ಹೇಳುತ್ತದೆ. ಆದರೆ, ಅಭಿವೃದ್ಧಿಯಾಗಿರುವ ಕೆರೆಗಳಿಗೇ ವಾರ್ಷಿಕ ನಿರ್ವಹಣೆ ಹೆಸರಿನಲ್ಲಿ ಹಣವನ್ನು ವೃಥಾ ವೆಚ್ಚ ಮಾಡಲಾಗುತ್ತಿದೆ. ಅವರಿಗೆ ಬೇಕಾದ ಕೆರೆಗಳನ್ನು ಮಾತ್ರ ಇದಕ್ಕೆ ಹೆಸರಿಸಿಕೊಳ್ಳ ಲಾಗಿದೆ. ಪಟ್ಟಣಗೆರೆ– ಕೆಂಚೇನಹಳ್ಳಿ ಕೆರೆ, ಕರಿಹೋಬನಹಳ್ಳಿ ಕೆರೆ ಸೇರಿದಂತೆ ಹಲವು ಕೆರೆಗಳು ಗಬ್ಬೆದ್ದು ನಾರುತ್ತಿವೆ. ಅವುಗಳ ಸ್ವಚ್ಛತೆಗೆ ಮುಂದಾಗಿಲ್ಲ. ಆದರೆ ವೆಚ್ಚ ಮಾಡಿರುವ ಕೆರೆಗಳಿಗೆ ಮತ್ತೆ ವೆಚ್ಚ ಮಾಡಲಾಗುತ್ತಿದೆ’ ಎಂದು ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್. ಅಮರೇಶ್ ದೂರಿದರು.
‘ಮಾಹಿತಿ ಹಕ್ಕು ಕಾಯ್ದೆಯಡಿ ಬಿಬಿಎಂಪಿ ನೀಡಿರುವ ಮಾಹಿತಿ ಪ್ರಕಾರ, 31 ಕೆರೆಗಳ ಅಭಿವೃದ್ಧಿಯಾಗ
ಬೇಕಿದೆ. ಹಣ ಇಲ್ಲ ಎಂದು ಇವುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲ ಕೆರೆಗಳಿಗೆ ಕನಿಷ್ಠ ಬೇಲಿ ಹಾಕುವುದು, ಕೊಳಚೆ ನೀರು ಹೋಗದಂತೆ ತಡೆಯುವ ಕೆಲಸ ಮೊದಲಾಗಬೇಕು’ ಎಂದು ಆಗ್ರಹಿಸಿದರು.
ಸಿಂಗಾಪುರ, ಕೊತ್ತನೂರು, ಹೂಡಿ ಗಿಡ್ಡನಕೆರೆ, ಕಗ್ಗದಾಸಪುರ, ಗೌಡನಪಾಳ್ಯ, ಹುಳಿಮಾವು, ವಸಂತಪುರ, ಮೇಸ್ತ್ರಿಪಾಳ್ಯ, ರಾಂಪುರ, ಗಂಗಶೆಟ್ಟಿ, ವೆಂಗಯ್ಯನಕೆರೆ, ನಾಗರಭಾವಿ, ವಡೇರಹಳ್ಳಿ, ಅಬ್ಬಿಗೆರೆ, ಚೌಡೇಶ್ವರಿ
ಬಡಾವಣೆ, ಕೋಣನಕುಂಟೆ, ಅರೆಕೆರೆ, ಬೆಟ್ಟಹಳ್ಳಿ, ಹೊರಮಾವು,
ಶ್ರೀಗಂಧದಕಾವಲ್, ಕೆಂಗೇರಿ, ಮೈಲಸಂದ್ರ (ಸುಣ್ಣಕಲ್ಲುಪಾಳ್ಯ), ನೆಲಗೆದರನಹಳ್ಳಿ, ಶಿವನಹಳ್ಳಿ ಕೆರೆ.
ದೊಡ್ಡಬಿದರಕಲ್ಲು (ನಾಗಸಂದ್ರ), ಗುಂಜೂರು ಮೌಜಿ, ಲಿಂಗಧೀರನಹಳ್ಳಿ, ಲಕ್ಷ್ಮಿಪುರ, ಜುನ್ನಸಂದ್ರ, ಸ್ವರ್ಣಕುಂಟೆ ಗುಡ್ಡ, ಗಾಂಧಿನಗರ ಹೊಸಕೆರೆಹಳ್ಳಿ, ಗುಂಜೂರು ಕರ್ಮೆಲರಾಂ, ಪಟ್ಟಂದೂರು ಅಗ್ರಹಾರ, ಗಾರ್ವೆಭಾವಿಪಾಳ್ಯ, ವೆಂಕಟೇಶಪುರ, ಕಾಚರಕನಹಳ್ಳಿ ಕೆರೆ.
ಚಿಕ್ಕಬೇಗೂರು, ಬೆಲ್ಲಹಳ್ಳಿ, ಶ್ರೀನಿವಾಸಪುರ, ಕೋನಸಂದ್ರ, ಸೋಂಪುರ, ಸೀತಾರಾಮಪಾಳ್ಯ, ನ್ಯಾನಪ್ಪನಹಳ್ಳಿ, ಪಟ್ಟಣಗೆರೆ– ಕೆಂಚೇನಹಳ್ಳಿ, ಸುಬೇದಾರನಕೆರೆ, ವರಾಹಸಂದ್ರ, ಚಿಕ್ಕಮ್ಮನಹಳ್ಳಿ, ಭೀಮನಕುಪ್ಪೆ, ಕನ್ನಲ್ಲಿ, ಕೆಂಚನಪುರ, ನರಸಪ್ಪನಹಳ್ಳಿ, ಸೂಲಿಕೆರೆ, ಬೈರಸಂದ್ರ ಮೇಲಿನಕೆರೆ, ಬಿ. ಚಂದ್ರಸಂದ್ರ, ಕಲ್ಯಾಣಿಕುಂಟೆ– ವಸಂತಪುರ, ಬಿ. ನಾರಾಯಣಪುರ, ಚನ್ನಸಂದ್ರ, ಚಿಕ್ಕಬೆಳ್ಳಂದೂರು, ಪಣತ್ತೂರು, ಮಾದಾವರ, ಮಲ್ಲಸಂದ್ರ ಗುಡ್ಡೆ, ಮಂಗಮ್ಮನಹಳ್ಳಿ, ಚಿಕ್ಕಗೌಡನಪಾಳ್ಯ, ದುಬಾಸಿಪಾಳ್ಯ, ಹೊಸಕೆರೆಹಳ್ಳಿ, ಗೊಟ್ಟಿಗೆಪಾಳ್ಯ, ಬೂಸೆಗೌಡನಕೆರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.