ADVERTISEMENT

ಕೆರೆ ಸಂಗ್ರಹ ಸಾಮರ್ಥ್ಯ ಶೇ 35ರಷ್ಟು ಕುಸಿತ

ಆರ್. ಮಂಜುನಾಥ್
Published 15 ಮೇ 2023, 20:58 IST
Last Updated 15 ಮೇ 2023, 20:58 IST
ರಾಜರಾಜೇಶ್ವರಿನಗರದಲ್ಲಿ ಮೂರನೇ ಬಾರಿಗೆ ಅಭಿವೃದ್ಧಿಯಾಗುತ್ತಿರುವ ಹಲಗೇವಡೇರಹಳ್ಳಿ ಕೆರೆ ಅಂಗಳದಲ್ಲಿ ಕಲ್ಲು, ಮಣ್ಣಿನ ಕಾಮಗಾರಿ
ರಾಜರಾಜೇಶ್ವರಿನಗರದಲ್ಲಿ ಮೂರನೇ ಬಾರಿಗೆ ಅಭಿವೃದ್ಧಿಯಾಗುತ್ತಿರುವ ಹಲಗೇವಡೇರಹಳ್ಳಿ ಕೆರೆ ಅಂಗಳದಲ್ಲಿ ಕಲ್ಲು, ಮಣ್ಣಿನ ಕಾಮಗಾರಿ   

ಬೆಂಗಳೂರು: ನಗರದಲ್ಲಿರುವ ಕೆರೆಗಳ ನೀರಿನ ಸಾಮರ್ಥ್ಯ ‘ಅಭಿವೃದ್ಧಿ ನೆಪದಲ್ಲಿ’ ಕುಸಿತವಾಗುತ್ತಿದೆ. ಮಳೆಗಾಲದಲ್ಲಿ ಪ್ರವಾಹದ ಭೀತಿ ನಿವಾರಿಸಿ, ನೀರನ್ನು ಉಳಿಸಿಕೊಳ್ಳಬೇಕಾದ ಕೆರೆಗಳ ಸಂಗ್ರಹ ಸಾಮರ್ಥ್ಯ ಶೇ 35ರಷ್ಟು ಕಡಿಮೆಯಾಗಿದೆ.

ಕೆರೆಗಳ ಏರಿಯನ್ನು ಅಗತ್ಯಕ್ಕಿಂತ ವಿಸ್ತರಿಸುವುದು, ಅಲಂಕಾರಿಕ ಗಿಡಗಳಿಗಾಗಿ ಉದ್ಯಾನ, ವ್ಯಾಯಾಮ ಸಲಕರಣೆಗಳು, ಗಜೆಬೊ, ಕಲ್ಲಿನ ಸಿಂಗಾರ ತಾಣಗಳು ಸೇರಿದಂತೆ ಹೆಚ್ಚು ಹಣ ವೆಚ್ಚವಾಗುವ ಹೈಟೆಕ್‌ ಸೌಲಭ್ಯಗಳ ಕಾಮಗಾರಿಗಳನ್ನೇ ಮಾಡಲಾಗುತ್ತಿದೆ. ಇದರಿಂದ ಬೆಂಗಳೂರಿನ 190 ಕೆರೆಗಳಲ್ಲಿ 2,316 ಎಕರೆ ನೀರಿನ ಪ್ರದೇಶ ನಶಿಸಿಹೋಗಿದೆ.

ನಗರದಲ್ಲಿ ಮಳೆ ಬಂದಾಗ ಇತ್ತೀಚಿನ ವರ್ಷಗಳಲ್ಲಿ ಕೆರೆಗಳು ತುಂಬಿಹರಿದು ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿರುವುದು. ತ್ಯಾಜ್ಯ, ಹೂಳು ತುಂಬಿಕೊಂಡಿರುವ ಜತೆಗೆ, ಕೆರೆಗಳ ಅಭಿವೃದ್ಧಿ ಸಂದರ್ಭದಲ್ಲಿ ಸೌಂದರ್ಯೀಕರಣಕ್ಕಾಗಿ ನೀರಿನ ಪ್ರದೇಶವನ್ನೇ ಕಡಿಮೆ ಮಾಡಲಾಗುತ್ತಿದೆ. ಹೀಗಾಗಿ, ನಗರದಲ್ಲಿರುವ 190 ಕೆರೆಗಳಲ್ಲಿ 62 ಲಕ್ಷ ಚದರ ಮೀಟರ್‌ ನೀರಿನ ಪ್ರದೇಶ ಇಲ್ಲದಂತಾಗಿದೆ.

ADVERTISEMENT

ಕಳೆದ ವರ್ಷ ಭಾರಿ ಮಳೆಯ ಸಂದರ್ಭದಲ್ಲಿ ನಗರದ ಪೂರ್ವದಲ್ಲಿ ಮುಳುಗಡೆಯಾಗಿದ್ದ ಪ್ರದೇಶದಲ್ಲಿನ ಕೆರೆಗಳೇ ಅತಿಹೆಚ್ಚು ಸಂಗ್ರಹ ಸಾಮರ್ಥ್ಯವನ್ನು ಕಳೆದುಕೊಂಡಿವೆ. ಮಹದೇವಪುರ ವಲಯದ 51 ಕೆರೆಗಳಲ್ಲಿ 615 ಎಕರೆ ಸಂಗ್ರಹ ಸಾಮರ್ಥ್ಯ ಇಲ್ಲದಾಗಿದೆ. ನಂತರದ ಸ್ಥಾನ ಬೊಮ್ಮನಹಳ್ಳಿ ವಲಯದ್ದು. ಇಲ್ಲಿ 43 ಕೆರೆಗಳಲ್ಲಿ 476 ಎಕರೆ ನೀರಿನ ಪ್ರದೇಶ ನಶಿಸಿಹೋಗಿದೆ. ಈ ಎರಡೂ ವಲಯದಲ್ಲೇ ಜನರು ಪ್ರವಾಹದಿಂದ ಸಾಕಷ್ಟು ನಲುಗಿಹೋಗಿದ್ದರು.

ಒಂದು ಸಣ್ಣ ಕೆರೆಗೂ ನಾಲ್ಕಾರು ಕೋಟಿ ವೆಚ್ಚ ಮಾಡಲಾಗುತ್ತಿದ್ದು, ವಾಕಿಂಗ್‌ ಟ್ರ್ಯಾಕ್‌, ಜಾಗಿಂಗ್‌ ಟ್ರ್ಯಾಕ್‌, ಸೈಕಲ್‌ ಪಾಥ್ ಎಂದೆಲ್ಲ ನೀರಿನ ಅಂಗಳವನ್ನು ಬರಿದು ಮಾಡಿ, ಮಣ್ಣು ಸುರಿಯಲಾಗುತ್ತಿದೆ. ಇಂತಹ ಅಭಿವೃದ್ಧಿ ಬೇಕೇ ಎಂಬ ಪ್ರಶ್ನೆಗೆ ಸ್ಥಳೀಯರು ಬಯಸುತ್ತಿದ್ದಾರೆ ಎಂಬ ಸಬೂಬು ನೀಡಲಾಗುತ್ತಿದೆ.

‘ಜೀವವೈವಿಧ್ಯ ಉಳಿಸಲು ಮತ್ತು ನೀರಿನ ಸಾಮರ್ಥ್ಯ ವೃದ್ಧಿಸುವ ಕಾರ್ಯಗಳಿಗಿಂತಲೂ ಹೆಚ್ಚಿನ ಸೌಂದರ್ಯೀಕರಣದ ಕಾಮಗಾರಿಗಳನ್ನೇ ಕೆರೆಗಳಲ್ಲಿ ಮಾಡಲಾಗುತ್ತಿದೆ. ಕೆರೆಯಲ್ಲಿ ನೀರು ನಿಲ್ಲದೆ ಹೋದರೆ ಕಾಂಕ್ರೀಟ್‌ ನಗರಿಯಾಗಿರುವ ಬೆಂಗಳೂರಿನಲ್ಲಿ ಮನೆಗಳಿಗೇ ನೀರು ನುಗ್ಗುತ್ತದೆ ಎಂಬುದನ್ನು ‘ಹೈಟೆಕ್‌ ಸೌಲಭ್ಯವನ್ನು’ ಕೆರೆಯಲ್ಲಿ ಬಯಸುವ ನಾಗರಿಕರೂ ತಿಳಿದುಕೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯ.

Cut-off box - ಹೆಣಕ್ಕೆ ಶೃಂಗಾರದಂತೆ! ಕೆರೆಗಳನ್ನು ಜೀವವೈವಿಧ್ಯಕ್ಕೆ ಅನುಗುಣವಾಗಿ ಉಳಿಸುವ ಕೆಲಸಗಳನ್ನು ಮಾಡಿದರೆ ಸಾಕು. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳಿಗೆ ಹೆಣಕ್ಕೆ ಮಾಡಲಾಗುವ ಸಿಂಗಾರದಂತೆ ಅಭಿವೃದ್ಧಿ ಹೆಸರಿನಲ್ಲಿ ಅನಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಫ್ರೆಂಡ್ಸ್‌ ಆಫ್‌ ಲೇಕ್ಸ್‌ನ ರಾಮ್‌ಪ್ರಸಾದ್‌ ಬೇಸರ ವ್ಯಕ್ತಪಡಿಸಿದರು. ಕೆರೆಗಳಲ್ಲಿ ವಾಕಿಂಗ್‌ ಟ್ರ್ಯಾಕ್‌ ಅನ್ನು ಅನಗತ್ಯವಾಗಿ ವಿಸ್ತರಿಸಲಾಗುತ್ತಿದ್ದು ಮೆಕ್ಸಿಗ್ರಾಸ್‌ ಅಲಂಕಾರಿಕ ಗಿಡಗಳು ಸೇರಿದಂತೆ ಉದ್ಯಾನಗಳನ್ನಾಗಿ ಮಾಡಲಾಗುತ್ತಿದೆ. ಮತ್ತಿಕೆರೆಯನ್ನು ಜೆ.ಪಿ. ಪಾರ್ಕ್‌ ಎಂದು ಚಳ್ಳಕೆರೆಯನ್ನು ಸಂಗೊಳ್ಳಿರಾಯಣ್ಣ ಉದ್ಯಾನ ಎಂದು ಮರುನಾಮಕರಣ ಮಾಡಿ ಕೆರೆಯ ಅಸ್ತಿತ್ವವನ್ನೇ ಕಳೆಯಲಾಗುತ್ತಿದೆ. ಉದ್ಯಾನವಾದರೆ ಏನನ್ನಾದರೂ ಮಾಡಬಹುದು ಎಂಬ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

Cut-off box - ‘ಡಿಪಿಆರ್‌ನಂತೆ ಅಭಿವೃದ್ಧಿ ಕಾಮಗಾರಿ’ ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಮೋದಿತ ವಿಸ್ತೃತ ಯೋಜನಾ ವರದಿಯಂತೆಯೇ (ಡಿಪಿಆರ್‌) ಕೆರೆಗಳ ಅಭಿವೃದ್ಧಿಯಾಗಿದೆ ಹಾಗೂ ಅಭಿವೃದ್ಧಿಯಾಗುತ್ತಿವೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗುವ ಡಿಪಿಆರ್‌ನಲ್ಲಿ ಎಲ್ಲ ರೀತಿಯ ಮಾಹಿತಿಗಳೂ ಇರುತ್ತವೆ. ಅದರಂತೆಯೇ ಕಟ್ಟಡ ಉಪಕರಣ ದ್ವೀಪ ನಡಿಗೆದಾರಿ ನಿರ್ಮಿಸಲಾಗುತ್ತದೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ವಿಜಯಕುಮಾರ್‌ ಹರಿದಾಸ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.