ಬೆಂಗಳೂರು: ‘ರಾಜ್ಯದಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗಿನ ಅವಧಿಯಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ 37 ಮಂದಿ ಮೃತಪಟ್ಟಿದ್ದಾರೆ’ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ತಿಳಿಸಿದ್ದಾರೆ.
‘ಕರಾಳ ಶನಿವಾರ’ ಎಂಬುದಾಗಿ ಟ್ವೀಟ್ ಮಾಡಿರುವ ಅವರು, ‘ಭಾನುವಾರ ನಸುಕಿನಲ್ಲಿ ಚಿತ್ರದುರ್ಗದಲ್ಲಿ ಐವರು ಸಾವಿಗೀಡಾಗಿದ್ದಾರೆ. ಇದರಿಂದಾಗಿ, ರಾಜ್ಯದಲ್ಲಿ 24 ಗಂಟೆಯಲ್ಲಿ 37 ಮಂದಿ ಪ್ರಾಣ ಕಳೆದುಕೊಂಡಂತಾಗಿದೆ’ ಎಂದಿದ್ದಾರೆ.
‘ಮೃತರಲ್ಲಿ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾರು ಪ್ರಯಾಣಿಕರು ಹಾಗೂ ಪಾದಚಾರಿಗಳು ಸಹ ಮೃತಪಟ್ಟಿದ್ದಾರೆ. ಬೈಕ್ ಸವಾರ ಹಾಗೂ ಹಿಂಬದಿ ಸವಾರ, ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ ಸಂಚರಿಸಬೇಕು. ಕಾರು ಚಾಲಕರು, ರಾತ್ರಿ ಸಮಯದಲ್ಲಿ ಹೆಚ್ಚು ಜಾಗೃತಿ ವಹಿಸಬೇಕು’ ಎಂದೂ ಹೇಳಿದ್ದಾರೆ.
ನಿದ್ರೆ ಮಂಪರಿನಲ್ಲಿ ಅಪಘಾತ
ಅಪಘಾತಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅಲೋಕ್‌ಕುಮಾರ್, ‘ದೂರದ ಪ್ರಯಾಣದ ಸಂದರ್ಭದಲ್ಲಿ ಚಾಲಕನ ನಿದ್ರೆ ಮಂಪರಿನಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಚಿತ್ರದುರ್ಗದ ಅಪಘಾತಕ್ಕೂ ಇದೇ ಕಾರಣ. ಜನರು ಜೀವ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ ದುಃಖವಾಗುತ್ತಿದೆ. ಸವಾರರು ಹಾಗೂ ಚಾಲಕರು, ಜಾಗೃತಿಯಿಂದ ವಾಹನಗಳನ್ನು ಚಲಾಯಿಸಬೇಕು. ಅವರ ನಿರ್ಲಕ್ಷ್ಯದಿಂದ ಇತರರ ಪ್ರಾಣಕ್ಕೂ ಸಂಚಕಾರ ಬರುತ್ತದೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.
ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಅಪಘಾತ ತಡೆಗೆ ಎಡಿಜಿಪಿ ಸಲಹೆಗಳು
ದೂರದ ಪ್ರಯಾಣದ ವೇಳೆ ಪರಿಣತ ಚಾಲಕರು ಜೊತೆಯಲ್ಲಿರಲಿ
ಪ್ರಯಾಣದ ವೇಳೆ ಇಬ್ಬರು ಚಾಲಕರು ಇದ್ದರೆ ಒಳ್ಳೆಯದು
ಮದ್ಯಪಾನ ಮಾಡಿ ಚಾಲನೆ ಮಾಡಬೇಡಿ
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ
ಪ್ರಯಾಣದ ವೇಳೆ ನಿದ್ರೆ ಬಂದರೆ ಚಾಲನೆ ನಿಲ್ಲಿಸಿ ವಿಶ್ರಾಂತಿ ಪಡೆಯಿರಿ
ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.