ಬೆಂಗಳೂರು: ‘ನಗರದ ಅಭಿವೃದ್ಧಿಗೆ ಬಿಬಿಎಂಪಿ ಬಜೆಟ್ ಗಾತ್ರಕ್ಕಿಂತಲೂ ಐದಾರು ಪಟ್ಟು ಹೆಚ್ಚು ಮೊತ್ತದ ಸಾಲವನ್ನು ತರುತ್ತಿರುವುದು ಅಪಾಯಕಾರಿ. ಇದರ ಸಾಧಕ ಬಾಧಕಗಳು, ದೀರ್ಘಕಾಲೀನ ಪರಿಣಾಮಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಬೇಕು’ ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ‘ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ₹39 ಸಾವಿರ ಕೋಟಿಯಷ್ಟು ಬೃಹತ್ ಮೊತ್ತವನ್ನು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಮುಂದಾಗಿರುವುದು ಅತ್ಯಂತ ಕಳವಳಕಾರಿ ಎಂದು ಹೇಳಿದ್ದಾರೆ.
‘ಬಿಬಿಎಂಪಿಯ 2024–25ರ ಬಜೆಟ್ ಗಾತ್ರವೇ ಕೇವಲ ₹12,371 ಕೋಟಿ. ಇಷ್ಟು ದೊಡ್ಡ ಮೊತ್ತವನ್ನು ಸಾಲ ತೆಗೆದುಕೊಳ್ಳುವುದರಿಂದ ಸ್ಥಳೀಯ ಸಂಸ್ಥೆಯು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವ ಸಾಧ್ಯತೆಯೇ ಹೆಚ್ಚು’ ಎಂದಿದ್ದಾರೆ.
‘ಬೆಂಗಳೂರಿನಲ್ಲಿ ಮೊದಲು ರಸ್ತೆಗಳ ಗುಂಡಿ ಮುಚ್ಚುವುದು, ರಸ್ತೆಗಳ ಮರು ಡಾಂಬರೀಕರಣ, ದುರಸ್ತಿ, ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣದಂತಹ ಕೆಲಸಗಳಿಗೆ ಆದ್ಯತೆ ನೀಡಬೇಕಾದ ತುರ್ತು ಇದೆ. ಹೊಸ ಯೋಜನೆಗಳ ಬದಲಿಗೆ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು’ ಎಂದಿದ್ದಾರೆ.
‘ಸ್ಕೈಡೆಕ್ ಯೋಜನೆಯಂತಹ ಆಡಂಬರ ಪ್ರದರ್ಶನದ ಯೋಜನೆಗಳು ಜನಸಾಮಾನ್ಯರಿಗೆ ಯಾವ ರೀತಿಯಲ್ಲಿಯೂ ಪ್ರಯೋಜನವಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.